ನವಲಗುಂದ: ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ

ಹುಬ್ಬಳ್ಳಿ, ಫೆ 25: ಮಹಾದಾಯಿ ಕಳಸಾ ಬಂಡೂರಿ ನಾಲಾ ಯೋಜನೆ ಈ ಭಾಗದ ಜನರ ಬಹುದಿನಗಳ ಕನಸಾಗಿದೆ. ಕೇಂದ್ರದ ಪರಿಸರ ಮಂಡಳಿಯು ಅನುಮತಿ ನೀಡಿದರೆ ನಾಳೆಯಿಂದಲೇ ಕಳಸಾ ಬಂಡೂರಿ ನಾಲಾ ಯೋಜನೆ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳಿದರು.
ನವಲಗುಂದದ ಮಾಡೆಲ್ ಹೈಸ್ಕೂಲ್ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಹಯೋಗದಲ್ಲಿ ನವಲಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಗೆ ಒಳಪಡುವ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ, ಗ್ಯಾರೆಂಟಿ ಯೋಜನೆಗಳ ಸಮಾವೇಶ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಕ್ಕುಪತ್ರಗಳ ವಿತರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಾದಿ ಶರಣರು ನುಡಿದಂತೆ ನಡೆದಂಥವರು. ಅವರ ಹಾದಿಯಲ್ಲಿ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಅಧಿಕಾರಕ್ಕೆ ಬಂದ 8 ತಿಂಗಳಲ್ಲೇ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇಂದು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮಾಡಲಾಗಿದೆ. ಶಂಕುಸ್ಥಾಪನೆ ಕಲ್ಲುಗಳನ್ನು ನೋಡಿದರೆ ಗೊತ್ತಾಗಲಿದೆ ಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ನಡೆಯುತ್ತಿವೆ ಎಂಬುದು. ಅಲ್ಲದೇ ಇಂದು ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುತ್ತಿದೆ. ಎನ್.ಎಚ್. ಕೋನರೆಡ್ಡಿ ಅವರು ಹಿಂದಿನ ಅವಧಿಯಲ್ಲಿ ರೂ. 3 ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದರು. 2013 ರಿಂದ 2018 ರವರೆಗೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿತ್ತು ಎಂದರು.
ಶಾಸಕರಾದ ಎನ್. ಎಚ್. ಕೋನರಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನವಲಗುಂದ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಅಂದಾಜು ರೂ. 200 ಕೋಟಿ ವೆಚ್ಚದಲ್ಲಿ 62 ಕಾಮಗಾರಿಗಳಿಗೆ ಶಂಕುಸ್ಥಾಪನೆ, ಭೂಮಿ ಪೂಜೆ ಮಾಡಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕು. ಮಹಾದಾಯಿ ಕಳಸಾ ಬಂಡೂರಿ ಯೋಜನೆ ಈ ಭಾಗದ ಜನರ ಬಹು ದಿನಗಳ ಕನಸಾಗಿದೆ. ಅದನ್ನು ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕಾಗಿದೆ. ಗ್ಯಾರಂಟಿ ಯೋಜನೆಯಿಂದ ಜನರಿಗೆ ಅನುಕೂಲವಾಗಿದೆ. ಶಕ್ತಿ ಯೋಜನೆಗೆ ಅನುಕೂಲವಾಗುವ ನಿಟ್ಟಿನಲ್ಲಿ 50 ಹೊಸ ಬಸ್‍ಗಳನ್ನು ಒದಗಿಸಲಾಗಿದೆ. ಈ ಭಾಗದಲ್ಲಿ ಸುಮಾರು 118 ಕಿ.ಮೀ.ಗಳ 34 ಚಕ್ಕಡಿ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನು ಮಾಡಲು ಪಣ ತೊಟ್ಟಿದ್ದೇನೆ. 2 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಭಾಗದ ರಸ್ತೆಗಳನ್ನು ಸುಧಾರಣೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತವಾರಿ ಸಚಿವ ಸಂತೋಷ ಲಾಡ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು 50 ಹೊಸ ಬಸ್‍ಗಳಿಗೆ ಚಾಲನೆ ನೀಡಿದರು. ಅಣ್ಣಿಗೇರಿ ರಸ್ತೆಯಲ್ಲಿ ವಸತಿ ನಿವೇಶನಗಳನ್ನು, ನಿರ್ಮಾಣ ಮಾಡುತ್ತಿರುವ ವಸತಿ ಬಡಾವಣೆಗಳು ಹಾಗೂ ಇಬ್ರಾಹಿಮಪುರ ರಸ್ತೆಯಲ್ಲಿ ಹೆದ್ದಾರಿ ಮಾದರಿಯಲ್ಲಿ ಚಕ್ಕಡಿ ರಸ್ತೆಗಳ ನಿರ್ಮಾಣ ಮಾಡಿರುವುದನ್ನು ವೀಕ್ಷಿಸಿದರು. ಸಾಂಕೇತಿಕವಾಗಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ, ಇಂಧನ ಸಚಿವ ಕೆ.ಜೆ.ಜಾರ್ಜ್, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಹಾಗೂ ಹುಬ್ಬಳ್ಳಿ-ಧಾರವಾಡ ಶಾಸಕರಾದ ಅಬ್ಬಯ್ಯ ಪ್ರಸಾದ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.