ಭಾರತ ಹುಣ್ಣಿಮೆ ಆಚರಿಸಿದ ನಾಗಠಾಣದ ಚಿಣ್ಣರು
ವಿಜಯಪುರ, ಫೆ.25:ಭಾರತ ಹುಣ್ಣಿಮೆ ‘ಬಡವರ ಹುಣ್ಣಿಮೆ’ ಎಂದೇ ಹೆಸರುವಾಸಿ. ಈ ಹುಣ್ಣಿಮೆಗೆ ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಮಹತ್ವವಿದೆ. ಭಾರತ ಹುಣ್ಣಿಮೆ ಬಂತು ಎಂದರೆ ರೈತರು ತಮ್ಮ ಎಲ್ಲ ಬೆಳೆಗಳ ರಾಶಿ ಮಾಡುವ ಪ್ರಕ್ರಿಯೆ ಮುಗಿಸಿ,ಹೋಳಿಗೆ ಊಟ ಮಾಡಿ ಸಂತೃಪ್ತರಾಗಬೇಕೆಂಬ ಪದ್ದತಿ ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಜನಜನಿತವಾಗಿದೆ.
ಈ ಹುಣ್ಣಿಮೆ ನಿಮಿತ್ತ ರೈತರು ತಾವು ಬೆಳೆದ ಕಡಲೆ, ಸೀತನಿ ಜೋಳ, ಗೋಧಿಯಿಂದ ‘ಗುಗ್ಗರಿ’ ಮಾಡಿ, ನೈವೇದ್ಯ ಹಿಡಿದು, ದೇವರಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಇಂದಿಗೂ ಗ್ರಾಮೀಣರಲ್ಲಿ ರೂಢಿಯಲ್ಲಿದೆ.
ಮನೆಯಲ್ಲಿರುವ ಚಿಕ್ಕ ಮಕ್ಕಳು ಕೈಯಲ್ಲಿ ತಟ್ಟೆ ಹಿಡಿದು, ಬಾರಿಸುತ್ತಾ, ‘ಒಳಗಿನ ದೇವರು ಹೊರಗೆ- ಹೊರಗಿನ ದೇವರು ಒಳಗೆ’ ಎಂದು ಹೇಳುವ ಸಂಪ್ರದಾಯ ಈ ಹುಣ್ಣಿಮೆಯ ವಿಶೇಷ.
ತಾಲೂಕಿನ ನಾಗಠಾಣ ಗ್ರಾಮದ ಮಕ್ಕಳಾದ ಅನುಶ್ರೀ- ಶ್ರೀನಿಧಿ ಬಂಡೆ ಅವರು ತಟ್ಟೆ ಬಾರಿಸುತ್ತಾ, ಭಾರತ ಹುಣ್ಣಿಮೆ ಆಚರಿಸಿದರು.