ಸಂಸದ ಅನಂತಕುಮಾರ ವಿರುದ್ಧ ಶಾಸಕ ಲಕ್ಷ್ಮಣ ಸವದಿ ವಾಗ್ದಾಳಿ
ವಿಜಯಪುರ,ಫೆ.25:ದೀಪ ಆರುವ ಮುನ್ನ ದೊಡ್ಡದಾಗಿ ಉರಿಯುತ್ತದೆ. ಅದೇ ರೀತಿ ಸಂಸದ ಅನಂತಕುಮಾರ ಹೆಗಡೆ ಸ್ಥಿತಿಯಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಅವರು ಸಂಸದ ಅನಂತಕುಮಾರ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ದ ಸಂಸದ ಅನಂತಕುಮಾರ ಹೆಗಡೆ ವಾಗ್ದಾಳಿ ವಿಚಾರವಾಗಿ ಶಾಸಕ ಲಕ್ಷ್ಮಣ ಸವದಿ ಇಂಡಿಯಲ್ಲಿ ಸಂಸದ ಅನಂತಕುಮಾರ ಹೆಗಡೆ ಅವರಿಗೆ ತಿರುಗೇಟು ನೀಡಿದರು.
ಅನಂತಕುಮಾರ ಹೆಗಡೆ ರಾಜಕೀಯವಾಗಿ ಕಳೆದು ಹೋಗುವ ಮುನ್ನ ಅವಾಚ್ಯ ಶಬ್ದಗಳಿಂದ ಮಾತನಾಡುತ್ತಿದ್ದಾರೆ.
ತಮ್ಮ ಅಸ್ತಿತ್ವವನ್ನು ತಾವೇ ಕಳೆದುಕೊಳ್ಳುತ್ತಿರುವುದು ಪ್ರಾರಂಭವಾಗಿದೆ.
ವಿನಾಶ ಕಾಲೇ ವಿಪರೀತ ಬುದ್ದಿ ಎಂದು ಸವದಿ ಕುಟುಕಿದರು.
ದೇವಸ್ಥಾನ ಹಣ ಸರ್ಕಾರ ಬಳಕೆ ವಿಚಾರ ಬಿಜೆಪಿಗೆ ಅಸ್ತ್ರವಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಸವದಿ,
ಬಿಜೆಪಿಯವರು ಹತಾಶರಾಗಿದ್ದಾರೆ
ರಾಜ್ಯದ 28 ಕ್ಷೇತ್ರಗಳನ್ನು ಗೆಲ್ಲಲು ಕೇಂದ್ರದವರು ಟಾರ್ಗೆಟ್ ನೀಡಿದ್ದಾರೆ. ಗೆಲ್ಲಲು ಆಗಲ್ಲ ಎಂಬ ಭ್ರಮನಿರಸನದಲ್ಲಿ ಮಾತನಾಡುತ್ತಿದ್ದಾರೆ.
28 ಸ್ಥಾನ ಗೆಲ್ಲುವ ಮಾತನಾಡುತ್ತಾರೆ.
ಪಕ್ಕದ ರಾಜ್ಯದ ಎರಡ್ಮೂರು ತಗೊಂಡು ಮೂವತ್ತರವರೆಗೆ ಗೆಲ್ಲುವ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
28 ಸ್ಥಾನ ಗೆಲ್ಲದಿದ್ದರೆ ಬಿಜೆಪಿಯಲ್ಲಿ ಬದಲಾವಣೆ ಆಗುವುದೇ? ಎಂದಿದ್ದಕ್ಕೆ ಬದಲಾವಣೆ ಆಗುವ ಪ್ರಶ್ನೆ ಉದ್ಭವ ಆಗಲ್ಲ.
ಈಗ ಎಲ್ಲಿ ಕೂಡಬೇಕೋ ಅಲ್ಲಿ ಕೂತಿದ್ದಾರೆ. ಬದಲಾವಣೆ ಆಗಿಯೇ ಕೂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮೇಕೆದಾಟು ಯೋಜನೆ ಕುರಿತು ದೊರೈ ಮುರುಗನ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸವದಿ, ನಮ್ಮ ಸರ್ಕಾರ ಬಂದು ಎಂಟು ತಿಂಗಳಾಗಿದೆ.
ಇನ್ನೂ ನಾಲ್ಕು ವರ್ಷ ನಾಲ್ಕು ತಿಂಗಳಿದೆ.
ಅಷ್ಟರಲ್ಲಿ ಮೇಕಾದಾಟು, ಅಪ್ಪರ ಭದ್ರಾ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಹಂತ ಹಂತವಾಗಿ ಮಾಡಲಾಗುತ್ತದೆ.
ಅದು ಸಿದ್ದಿಯಾಗುತ್ತದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಸಚಿವರ ಸ್ಪರ್ದೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸವದಿ ,
ರಾಷ್ಟ್ರೀಯ ಪಕ್ಷದಲ್ಲಿ ಅಂಥ ವಿಚಾರಗಳು ಸಹಜವಾಗಿ ಬರುತ್ತವೆ.
ಯಾವ ಅಭ್ಯರ್ಥಿ ಸೂಕ್ತವಾಗುತ್ತಾರೆ. ಅಂಥವರ ಸ್ಪರ್ಧೆ ಕುರಿತು ನಮ್ಮ ಹೈಕಮಾಂಡ್ ನವರು ತೀರ್ಮಾನ ಮಾಡುತ್ತಾರೆ.
ಆ ತೀರ್ಮಾನಕ್ಕೆ ಬದ್ಧರಾಗಿ ಕೆಲಸ ಮಾಡುತ್ತೇವೆ.
ನಾನು ರಾಜ್ಯ ರಾಜಕಾರಣದಲ್ಲೇ ಇರುವೆ ಎಂದು ಸ್ಪಷ್ಟ ಪಡಿಸಿದರು.