ಮೃತ ವಿದ್ಯಾರ್ಥಿ ಸಾವಿಗೆ ನ್ಯಾಯ: ಮಾಜಿ ಶಾಸಕ ಮಂಜುನಾಥ್ ಭರವಸೆ
ಸಂಜೆವಾಣಿ ನ್ಯೂಸ್
ಹುಣಸೂರು,ಫೆ.25-ಇತ್ತೀಚೆಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಕಾಲೇಜು ವಿದ್ಯಾರ್ಥಿ ತಾಲೂಕಿನ ದಾಸನಪುರದ ಮುತ್ತುರಾಜ್ ಮನೆಗೆ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮುಖಂಡರೊಂದಿಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ, ದೈರ್ಯ ತುಂಬಿದರು.
ಮುತ್ತುರಾಜ್‍ನ ತಂದೆ ರವಿಕುಮಾರ್ ಘಟನೆಯ ಕುರಿತು ಮಾಹಿತಿ ನೀಡಿ, ಇದ್ದೊಬ್ಬ ಮಗನನ್ನು ಕಳೆದುಕೊಂಡಿದ್ದೇವೆ, ನಮಗೆ ದಿಕ್ಕೆ ತೋಚದಂತಾಗಿದೆ. ಆತ ಏನಾದರೂ ತಪ್ಪು ಮಾಡಿದ್ದರೆ ತಮಗೆ ಅಥವಾ ಪೆÇಲೀಸರಿಗೆ ತಿಳಿಸಬೇಕಿತ್ತು. ಅದನ್ನು ಬಿಟ್ಟು ಆತನ ಮೇಲೆ ಹಲ್ಲೆ ನಡೆಸಿ ಅವನ ಸಾವಿಗೆ ಕಾರಣವಾಗಿರುವುದು ಆತಂಕ ಉಂಟು ಮಾಡಿದ್ದು, ಇಂತಹ ಸ್ಥಿತಿ ಯಾವ ತಂದೆ-ತಾಯಿಗೂ ಬರಬಾರದು, ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಮನವಿ ಮಾಡಿಕೊಂಡರು.
ಈ ಪ್ರಕರಣಕ್ಕೆ ಸಂಬಂಧಿಸಿ ಡಿ.ವೈ.ಎಸ್.ಪಿ ಗೋಪಾಲಕೃಷ್ಣರಿಂದ ಘಟನೆ ಹಾಗೂ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ಪಡೆದ ಮಂಜುನಾಥ್ ಸಂಕಷ್ಟಕ್ಕೊಳಗಾಗಿರುವ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವ ಕುರಿತು ಮುಖ್ಯಮಂತ್ರಿ ಹಾಗೂ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸುವೆನೆಂದರು.
ಈ ವೇಳೆ ಗ್ರಾ.ಪಂ ಸದಸ್ಯ ರಾಘವೇಂದ್ರ, ತಾ.ಪಂ ಮಾಜಿ ಸದಸ್ಯ ವೆಳ್ಳಂಗಿರಿ, ಗ್ರಾ.ಪಂ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಮುಖಂಡರಾದ ಮಹೇಶ್, ಗೋವಿಂದಶೆಟ್ಟಿ, ದಿನೇಶ್, ಚಂದ್ರು ಮತ್ತಿತರರಿದ್ದರು.