ಜಮೀನಿನಲ್ಲಿ ಜೋತು ಬಿದ್ದಿದ್ದ ವಿದ್ಯುತ್ ತಂತಿ ತುಂಡಾಗಿ ಹಸು ಸಾವು
ಸಂಜೆವಾಣಿ ನ್ಯೂಸ್
ನಂಜನಗೂಡು.ಫೆ.25:-ತಾಲ್ಲೂಕಿನ ಹೆಮ್ಮರಗಾಲ ಗ್ರಾಮದ ಜಮೀನೊಂದರಲ್ಲಿ ವಿದ್ಯುತ್ ತಂತಿ ತುಂಡಾಗಿ ಸಾಕು ಹಸುವಿನ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲಿಯೇ ವೃದ್ಧ ಮಹಿಳೆಯ ಹಸು ಸಾವನಪ್ಪಿರುವ ಘಟನೆ ನಡೆಯತೊಡಗಿದೆ. ಹೆಮ್ಮರಗಾಲ ಗ್ರಾಮದ ಪುಟ್ಟಮ್ಮ ಎಂಬ ವೃದ್ಧೆ ತಮ್ಮ ಜಮೀನಿನಲ್ಲಿ ಹಸುವನ್ನು ಮೇಯಿಸುತ್ತಿದ್ದ ವೇಳೆ ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ತುಂಡಾಗಿ ಏಕಾ ಏಕಿ ಹಸುವಿನ ಮೇಲೆ ಬಿದ್ದಿದೆ. ಈ ವೇಳೆ ಹಸು ವಿದ್ಯುತ್ ತಂತಿಗೆ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ ಎನ್ನಲಾಗಿದೆ. ವೃದ್ಧೆ ಪುಟ್ಟಮ್ಮ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ದೊಡ್ಡಕವಲಂದೆ ಹೋಬಳಿ ಘಟಕದ ಅಧ್ಯಕ್ಷ ಮಲ್ಲಹಳ್ಳಿ ರವಿ ಭೇಟಿ ನೀಡಿ ಪರಿಶೀಲನೆ ಮಾಡಲಾಗಿ ಜೀವ ಬದುಕಿಸಿಕೊಂಡಿರುವ ವೃದ್ಧ ಮಹಿಳೆಯ ಸ್ಥಿತಿ ನೋಡಿ ನಿಬ್ಬೆರಗಾದರು. ನಂಜನಗೂಡಿನ ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಹೆಮ್ಮರಗಾಲ ಮತ್ತು ಸುತ್ತಮುತ್ತಲ ಜಮೀನುಗಳಲ್ಲಿ ಜೋತು ಬಿದ್ದಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಲು ಸಾಕಷ್ಟು ಭಾರಿ ಮನವಿ ಮಾಡಲಾಗಿತ್ತು.ಜೊತೆಗೆ ದೂರವಾಣಿ ಮುಖಾಂತರ ಕರೆ ಮಾಡಿಯೂ ಕೂಡ ಸಮಸ್ಯೆಯನ್ನು ಸರಿಪಡಿಸಲು ಮನವಿ ಮಾಡಲಾಗಿತ್ತು. ನಂಜನಗೂಡು ವಿದ್ಯುತ್ ಇಲಾಖೆಯ ಅಧಿಕಾರಿಗಳ ನಿರ್ಲಕ್ಷತನದಿಂದ ವೃದ್ಧ ಮಹಿಳೆ ಪುಟ್ಟಮ್ಮ ಜೀವನೋಪಾಯಕ್ಕೆ ಸಾಕಿ ಸಲುಹಿದ ಹಸು ಇಂದು ಜೀವ ಕಳೆದುಕೊಂಡಿದೆ ಕೂಡಲೇ ಸಂಬಂಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳು ಪರಿಹಾರ ಒದಗಿಸಿ ವೃದ್ಧ ಮಹಿಳೆಯ ಬದುಕಿಗೆ ನೆರವಾಗಬೇಕು ಇಲ್ಲದಿದ್ದಲ್ಲಿ ನಂಜನಗೂಡು ವಿದ್ಯುತ್ ಇಲಾಖೆ ಅಧಿಕಾರಿಗಳ ಕಚೇರಿಯ ಮುಂದೆ ಉಗ್ರವಾದ ಪ್ರತಿಭಟನೆಯನ್ನು ಮಾಡಲಾಗುತ್ತದೆ ಎಂದು ಸಂದರ್ಭದಲ್ಲಿ ಎಚ್ಚರಿಕೆ ನೀಡಲಾಗಿದೆ.