ಫೆ.27ಕ್ಕೆ ಗ್ರಾಮೀಣ ಬಂದ್‍ಗೆ ರೈತ ಸಂಘ ಕರೆ
ಸಂಜೆವಾಣಿ ನ್ಯೂಸ್
ಮೈಸೂರು.ಫೆ.25:- ಈ ಬಾರಿಯ ಡಬ್ಲುಯಟಿಒ ಸಮಾವೇಶದಲ್ಲಿ ಅದರ ಒಪ್ಪಂದದಿಂದ ಭಾರತ ಹೊರ ಬರಬೇಕೆಂದು ಆಗ್ರಹಿಸಿ ಇದೇ ಫೆ. 27 ರಂದು ಗ್ರಾಮೀಣ ಬಂದ್‍ಗೆ ಕರೆ ನೀಡಲಾಗಿದೆ ಎಂದು ಸಾಮೂಹಿಕ ನಾಯಕತ್ವದ ರೈತ ಸಂಘ ತಿಳಿಸಿದೆ.
ಈ ಕುರಿತು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮುಖಂಡ ವಿದ್ಯಾಸಾಗರ ರಾಮೇಗೌಡ ಮಾತನಾಡಿ, ಡಬ್ಲು?ಯಟಿಒ ಒಪ್ಪಂದದಿಂದಾಗಿ ಮುಂದುವರಿದ ರಾಷ್ಟ್ರಗಳು ತಮ್ಮಲ್ಲಿನ ಕೃಷಿ ಉತ್ಪನ್ನ ತಂದು ಸುರಿಯುತ್ತವೆ. ಇದರಿಂದಾಗಿ ಇಲ್ಲಿನ ರೈತರಿಗೆ ಅನಾನುಕೂಲವಾಗಲಿದೆ. ಜೊತೆಗೆ ಕಡಿಮೆ ದರದಲ್ಲಿ ಪಡಿತರ ನೀಡುವ ವ್ಯವಸ್ಥೆಗೂ ಅಡ್ಡಿಯುಂಟಾಗುತ್ತದೆ. ಹೀಗಾಗಿ ಅದರ ಒಪ್ಪಂದದಿಂದ ಹೊರಬರಬೇಕು ಎಂದು ಗ್ರಾಮೀಣ ಬಂದ್‍ಗೆ ಕರೆ ನೀಡಲಾಗಿದೆ. ಈ ವೇಳೆ ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ಹೊರತು ಪಡಿಸಿ ಎಲ್ಲ ವಾಣಿಜ್ಯ ಚಟುವಟಿಕೆ ಬಂದ್ ಆಗಲಿದೆ ಎಂದು ವಿವರಿಸಿದರು.
ಬಳಿಕ, ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಶಾಸನಬದ್ಧವಾಗಬೇಕು, ದೆಹಲಿ ಚಲೋ ರೈತರ ಮೇಲಿನ ದೌರ್ಜನ್ಯ ನಿಲ್ಲಿಸಬೇಕು, ಪ್ರಾಕೃತಿಕ ವಿಕೋಪದ ಕಾರಣ ರೈತರು ಸಾಲ ಮರುಪಾವತಿ ಕಷ್ಟವಾಗಿರುವ ಕಾರಣ ರಾಜ್ಯದ ಎಲ್ಲಾ ರೈತರ ಸಾಲ ಮನ್ನಾ ಮಾಡಬೇಕು, ರಾಜ್ಯ ಮಟ್ಟದಲ್ಲಿ ಎಂಎಸ್‍ಪಿ ಕಾಯ್ದೆ ಜಾರಿಗೆ ತರಬೇಕು, ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಗೆ ರಾಜ್ಯ ಸರ್ಕಾರ ಬೋನಸ್ ರೂಪದಲ್ಲಿ ಸಹಾಯಧನ ಸೇರಿಸಿ ಬೆಂಬಲ ಬೆಲೆ ಘೋಷಿಸಬೇಕೆಂದು ಒತ್ತಾಯಿಸಿದರು. ಇನ್ನಿತರ ಪದಾಧಿಕಾರಿಗಳಾದ ಮಂಜುಕಿರಣ್, ಸತೀಶ್‍ರಾವ್, ಇಮ್ಮಾವು ರಘು, ಶ್ವೇತಾ ಹಾಜರಿದ್ದರು.