ದಲಿತರ ಹಣ ಅನ್ಯ ಬಳಕೆಗೆ ಖಂಡನೀಯ
ಸಂಜೆವಾಣಿ ನ್ಯೂಸ್
ಮೈಸೂರು.ಫೆ.25:- ಸಂವಿಧಾನ ಜಾಗೃತಿ ಜಾಥಾ ಆಂದೋಲನ ರಾಜ್ಯ ಸರ್ಕಾರ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಆದರೆ ಇದೇ ವೇಳೆ ದಲಿತರಿಗಾಗಿ ಬಜೆಟ್‍ನಲ್ಲಿ ಮೀಸಲಿಟ್ಟಿದ್ದ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಂಡಿರುವುದು ಖಂಡನಾರ್ಹ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಸಿ. ವೆಂಕಟರಮಣಪ್ಪ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, 2023-24 ರ ಸಾಲಿನಲ್ಲಿ ದಲಿತರಿಗೆ ಬಳಸಬೇಕಾಗಿದ್ದ ಹಣದಲ್ಲಿನ 11 ಸಾವಿರ ಕೋಟಿ ರೂ.ಗಳನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಲಾಗಿದೆ. ಹೀಗಾಗಿ ಇದನ್ನು ಕೂಡಲೇ ಹಿಂದಿರುಗಿಸಬೇಕು. ಇನ್ನು, ನೂತನ ಬಜೆಟ್‍ನಲ್ಲಿ ಮೀಸಲಿರಿಸಿರುವ ಹಣವನ್ನೂ ಗ್ಯಾರೆಂಟಿ ಯೋಜನೆಗಳಿಗೆ ಬಳಸುವ ಶಂಕೆಯಿದೆ.
ಆದ್ದರಿಂದ ಈ ರೀತಿ ಮಾಡುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಬೇಕು,. ಜೊತೆಗೆ ಈ ಹಿಂದೆ ಬಳಸಿಕೊಂಡ ಹಣವನ್ನು ಹಂತ ಹಂತವಾಗಿ ಸಮಾಜ ಕಲ್ಯಾಣ ಇಲಾಖೆಗೆ ವಾಪಸು ಮಾಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದರು.
ಇನ್ನಿತರ ಪದಾಧಿಕಾರಿಗಳಾದ ಕಂದೇಗಾಲ ಶಿವಣ್ಣ, ಅನುಷಾ, ಸುರೇಶ್, ಶಿವಮಾದು, ಶಿವನಂಜು ಇದ್ದರು.