ಶಾಲಾ-ಕಾಲೇಜುಗಳು ತಂಬಾಕು ಮುಕ್ತವಾಗಿರಲಿ
ಬಾಗಲಕೋಟೆ, ಸೆ 15: ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜು ಶೈಕ್ಷಣಿಕ ಸಂಸ್ಥೆಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳನ್ನಾಗಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ರಾಷ್ಟ್ರೀಯ ತಂಬಾಕು ನಿಯಂತ್ರಣ ಜಿಲ್ಲಾ ಸಮನ್ವಯ ಸಮಿತಿ ಹಾಗೂ ಜಿಲ್ಲಾ ಕ್ಷಯ ರೋಗ ನಿರ್ಮೂಲೊನಾ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೆಲವೊಂದು ಶಾಲೆಗಳ ಪಕ್ಕದಲ್ಲೇ ಪಾನ್ ಅಂಗಡಿಗಳನ್ನು ತೆರೆದಿರುತ್ತಾರೆ ಎಂಬ ದೂರುಗಳು ಜಿಲ್ಲಾಡಳಿತದವರೆಗೂ ಬಂದಿದ್ದು, ಈ ಬಗ್ಗೆ ಸ್ಥಳಿಯ ಸಂಸ್ಥೆಗಳು, ಶಾಲಾ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದರು.
ಶಾಲಾ ಕಾಲೇಜು ಅದರಲ್ಲೂ ವಿಶೇಷವಾಗಿ ಪಿ.ಯು.ಸಿ ತರಗತಿಯಲ್ಲಿ ಓದುವ ವಿದ್ಯಾರ್ಥಿಗಳಿಗೆ ತಂಬಾಕು ಮತ್ತು ಮಾದಕ ವಸ್ತುಗಳನ್ನು ಸೇವಿಸುವದರಿಂದ ಉಂಟಾಗುವ ದುಷ್ಟಪರಿಣಾಮಗಳ ಕುರಿತು ಹೆಚ್ಚಿನ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು. ಪ್ರೌಢ ಶಾಲೆಗಳ ಮುಖ್ಯಸ್ಥರು ಪ್ರತಿದಿನದ ಶಾಲೆಯ ಪ್ರಾಥನಾ ವೇಳೆ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳುವ ಮೂಲಕ ಮತ್ತು ಕಾಲೇಜು ಉಪನ್ಯಾಸಕರು ವಿದ್ಯಾರ್ಥಿಗಳಿಂದ ಪ್ರಭಾತ ಪೇರಿ ಏರ್ಪಡಿಸುವುದು, ಯುವ ಪೀಳಿಗೆ ಆಂದೋಲನ ನಡೆಸುವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದರು.
ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕೋಟ್ಪಾ ಕಾಯ್ದೆಯ ಸೆಕ್ಷನ್ 4 ರ ಎಚ್ಚರಿಕೆ ನಾಮ ಫಲಕವನ್ನು ಪ್ರದರ್ಶನ ಮಾಡಲು ಸೂಚಿಸಬೇಕು ಹಾಗೂ ಕಛೇರಿಯನ್ನು ತಂಬಾಕು ಮುಕ್ತ ಎಂದು ಘೋಷಣೆ ಮಾಡಬೇಕು ಎಂದು ತಿಳಿಸಿದರು. ಹೆಚ್ಚಿನ ಸಂಖ್ಯೆಯ ಪೌರಕಾರ್ಮಿಕರು ದುಶ್ಚಗಳಿಗೆ ಬಲಿಯಾಗುತ್ತಿರುವುದು ಕಾಣಬಹುದಾಗಿದೆ ಸರಕಾರಿ ಆಸ್ಪತ್ರೆಗಳಲ್ಲಿ ಆಪ್ತ ಸಮಾಲೋಚನಾ ಕೇಂದ್ರಗಳು ಇರುವ ಕುರಿತು ಪ್ರಚಾರಪಡಿಸಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಾಡಬೇಕು ಎಂದು ಹೇಳಿದರು.
ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸುವರ್ಣಾ ಕುಲಕರ್ಣಿ ಮಾತನಾಡಿ ವಯಸ್ಕರ ಬಿ ಸಿ ಜಿ ಲಸಿಕಾಕರಣವನ್ನು ಸೆ.22 ರಿಂದ ಹಮ್ಮಿಕೊಳ್ಳಲಾಗಿದ್ದು ಲಸಿಕಾ ವರದಿಗಳನ್ನು ಸಂಬಂದಪಟ್ಟ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಭೆಯಲ್ಲಿ ವಯಸ್ಕರ ಬಿ ಸಿ ಜಿ ಲಸಿಕಾಕರಣದ ಕುರಿತು ಐ ಇ ಸಿ ಚಟುವಟಿಕೆಗಳ ಬಿತ್ತಿ ಪತ್ರಗಳನ್ನು ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿದರು. ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಸೇರಿದಂತೆ ಆರೋಗ್ಯ ಇಲಾಖೆಯ ಎಲ್ಲ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿಗಳು ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.