ಮಾನವ ಸರಪಳಿ ಕಾಲಕ್ಕೆ ಹೆಜ್ಜೇನು ದಾಳಿ: ಜನ ದಿಕ್ಕಾಪಾಲು!
ಲಕ್ಷ್ಮೇಶ್ವರ, ಸೆ15: ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಮರಳಿ ಬರುತ್ತಿದ್ದಾಗ ಏಕಾಏಕಿ ಹೆಜ್ಜೇನು ದಾಳಿಮಾಡಿದ್ದರಿಂದ ಹಲವರು ಗಾಯಗೊಂಡ ಘಟನೆ ಇಂದು ಮುಂಜಾನೆ ತಾಲೂಕಿನ ಬಾಲೆಹೊಸೂರು ಬಳಿ ಸಂಭವಿಸಿ ಜನರನ್ನು ಗಾಬರಿ, ಆತಂಕಕ್ಕೀಡು ಮಾಡಿತು.
ಏಕಾಎಕಿ ಜೇನು ಹುಳುಗಳು ದಾಳಿಮಾಡುತ್ತಿದ್ದಂತೆ ಗಲಿಬಲಿಗೊಂಡು ವಿದ್ಯಾರ್ಥಿಗಳು ಶಿಕ್ಷಕರು, ಸಾರ್ವಜನಿಕರು ಹೆಜ್ಜೇನು ದಾಳಿಯಿಂದ ಪಾರಾಗಲು ದಿಕ್ಕಾಪಾಲಾಗಿ ಓಡಲಾರಂಬಿಸಿದರು. ಕೆಲವರಿಗೆ ಜೇನು ಹುಳುಗಳು ಕಡಿದಿದ್ದು 15 ರಿಂದ 20 ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಕರಿಗೆ ಜೇನು ಕಚ್ಚಿದ್ದಾಗಿ ತಿಳಿದು ಬಂದಿದೆ. ಕೆಲವರು ವಾಹನದಲ್ಲಿ ಅವಿತುಕೊಂಡರೆ ಕೆಲವರು ಅಲ್ಲಿಯೇ ಇದ್ದ ತಾಡಪತ್ರಿ ಅಡಿ ತೂರಿಕೊಂಡು ಪಾರಾಗಿದ್ದಾರೆ.
ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯರೂ ಆದ ಶಾಸಕ ಡಾ. ಚಂದ್ರು ಲಮಾಣಿ, ಇನ್ನಿತರ ವೈದ್ಯರು ಚಿಕಿತ್ಸೆ ನೀಡಿದರು.