ಐದು ವರ್ಷಗಳ ಅಭಿವೃದ್ಧಿ ಕೆಲಸಗಳ ಕುರಿತು ಬಹಿರಂಗ ಚರ್ಚೆಗೆ ಕರೆದ ಸಂಸದ ಡಾ. ಜಾಧವ್
ಕಲಬುರಗಿ:ಫೆ.24: ನಾನು ಕಳೆದ ಐದು ವರ್ಷಗಳ ಅವಧಿಯಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಕುರಿತು ಕಾಂಗ್ರೆಸ್ ಪಕ್ಷದವರು ಬಹಿರಂಗ ಚರ್ಚೆಗೆ ಬರಬೇಕು ಎಂದು ಸಂಸದ ಡಾ. ಉಮೇಶ್ ಜಾಧವ್ ಅವರು ಹೇಳಿದರು.
ಶನಿವಾರ ಬಿಜೆಪಿ ಕಚೇರಿಯಲ್ಲಿ ಲೋಕಸಭಾ ಚುನಾವಣೆಯ ಪಕ್ಷದ ಪ್ರಚಾರ ಕಾರ್ಯಾಲಯದ ಪ್ರಾರಂಭೋತ್ಸವದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ಇಲ್ಲಿಯವರೆಗೆ ಕ್ಷೇತ್ರವನ್ನು ಪ್ರತಿನಿಧಿಸಿದರೂ ಸಹ ಅವರ ಅವಧಿಯಲ್ಲಿ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ನಾನು ಆಯ್ಕೆಯಾಗಿ ಕೇವಲ ಐದು ವರ್ಷಗಳು ಆಗಿವೆ. ಅದರಲ್ಲಿ ಎರಡು ವರ್ಷಗಳ ಅವಧಿ ಕೋವಿಡ್ ನಿಯಂತ್ರಣಕ್ಕಾಗಿಯೇ ಹೋಗಿದೆ. ಉಳಿದ ಮೂರು ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವೆ. ಅವುಗಳ ಬಹಿರಂಗ ಚರ್ಚೆಗೆ ನನ್ನೊಂದಿಗೆ ಕಾಂಗ್ರೆಸ್ಸಿಗರು ಬರಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಸಬ್ ಕೆ ಸಾತ್, ಸಬ್ ಕೆ ವಿಕಾಸ್, ಸಬ್ ಕೆ ವಿಶ್ವಾಸ ಎಂಬ ಘೋಷಣೆಯೇ ದೇಶಕ್ಕೆ ಗ್ಯಾರಂಟಿಯಾಗಿದೆ. ಹಾಗಾಗಿ ಕಾರ್ಯಕರ್ತರು ಪ್ರತಿ ಊರಿಗೆ ಹೋಗಿ ಮೋದಿ ಅವರ ಕಾರ್ಯಕ್ರಮಗಳನ್ನು ಎಲ್ಲರಿಗೂ ಪ್ರಚಾರ ಮಾಡಿದ್ದೇವೆ. ಈಗಾಗಲೇ ಎಲ್ಲ ಮಾಧ್ಯಮಗಳ ಸರ್ವೆಯಲ್ಲಿ ಬಿಜೆಪಿ ಮತ್ತೆ ಗೆಲ್ಲುತ್ತದೆ ಎಂಬ ಫಲಿತಾಂಶ ಬಂದಿದೆ. ಸಮೀಕ್ಷೆಯ ಪ್ರಕಾರ 377 ಬಿಜೆಪಿ ಸಂಸದರು ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗುತ್ತಾರೆ ಎಂದು ಹೇಳಿವೆ. ಲೋಕಸಭಾ ಚುನಾವಣೆಗೆ ಕೇವಲ 51 ದಿನಗಳಿವೆ. ಅಷ್ಟರಲ್ಲಿ ಎಲ್ಲ ಕೆಲಸಗಳು ಮುಗಿಯುತ್ತವೆ. ಎಲ್ಲರೂ ಇರುವ ಭಿನ್ನಾಭಿಪ್ರಾಯಗಳನ್ನು ಬಿಡಬೇಕು ಎಂದು ಅವರು ಹೇಳಿದರು.
ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರು ಕೇಂದ್ರ ಸಚಿವರು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮುಂತಾದ ಬಿಜೆಪಿಯ ರಾಷ್ಟ್ರೀಯ ನಾಯಕರು ಕ್ಷೇತ್ರಕ್ಕೆ ಬರುತ್ತಾರೆ ಎಂಬ ಹೇಳಿಕೆಗೆ ತೀವ್ರವಾಗಿ ಆಕ್ಷೇಪಿಸಿದ ಡಾ. ಜಾಧವ್ ಅವರು, ಬಿಜೆಪಿ ರಾಷ್ಟ್ರೀಯ ನಾಯಕರು ಎಲ್ಲ ಕ್ಷೇತ್ರಗಳಿಗೂ ಹೋಗುತ್ತಾರೆ. ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವು ಭಾರತದ ಒಂದು ಮಹತ್ವದ ಪ್ರದೇಶ. ಇಂತಹ ಪ್ರದೇಶಕ್ಕೆ ಭೇಟಿ ನೀಡಿದ್ದರ ಕುರಿತು ಹಗುರವಾಗಿ ಮಾತನಾಡುತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜಸಿಂಗ್ ಚವ್ಹಾಣ್ ಅವರು ಜಿಲ್ಲೆಗೆ ಆಗಮಿಸಿ ಖುಷಿ ಪಟ್ಟರು. ಅವರು 6 ಬಾರಿ ಸಂಸದರು, ಐದು ಬಾರಿ ಶಾಸಕರಾಗಿದ್ದವರು. ಅವರು ಅನುಭವಿ ರಾಷ್ಟ್ರೀಯ ನಾಯಕರು. ಕ್ಷೇತ್ರದಲ್ಲಿ ಬಿಜೆಪಿಯ ಸಂಘಟನೆಯ ಕುರಿತು ಅವರು ತೃಪ್ತಿ ಹೊಂದಿದ್ದಾರೆ. ಆದಾಗ್ಯೂ, ಕ್ಷೇತ್ರ ಸುಲಭವಲ್ಲ. ನಾವು ಕಷ್ಟಪಡಬೇಕಾಗುತ್ತದೆ. ನೂರಕ್ಕೆ ನೂರರಷ್ಟು ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿದ ಅವರು, ಮಲ್ಲಿಕಾರ್ಜುನ್ ಖರ್ಗೆಯವರು ಪ್ರಭಾವಿ ರಾಜಕಾರಣಿ. ಅವರು ಅಷ್ಟು ಸುಲಭ ಬಿಡುವುದಿಲ್ಲ. ಹೀಗಾಗಿ ನಾವು ಸುಮ್ಮನೇ ಕೂಡುವುದಿಲ್ಲ. ಎಲ್ಲ ನೆನಪುಗಳನ್ನು ಜನರಿಗೆ ತಿಳಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿನ ಬಿಜೆಪಿ ಸರ್ಕಾರದಲ್ಲಿ ನಾನು ಆಯ್ಕೆಯಾಗಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವೆ. ನನ್ನ ಅವಧಿಯಲ್ಲಿ ಎರಡು ವರ್ಷ ಕೊರೋನಾ ನಿಯಂತ್ರಣದಲ್ಲಿ ತೊಡಗಿಸಿಕೊಂಡೆ. ಕಾರ್ಯಕರ್ತರು ಆ ಅವಧಿಯಲ್ಲಿ ದುಡಿದರು. ಎಲ್ಲರೂ ಮನೆ, ಮನೆಗೆ ಹೋಗಿ ಲಸಿಕೆ, ಔಷಧಿಗಳನ್ನು ಕೊಟ್ಟಿದ್ದಾರೆ. ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ಸಿಗರು ಮನೆಯಲ್ಲಿಯೇ ಕುಳಿತು ಹೇಳಿಕೆ ಕೊಡುವ ಕೆಲಸವನ್ನೂ ಮಾಡಿಲ್ಲ ಎಂದು ಅವರು ಕಾಂಗ್ರೆಸ್ಸಿಗರ ವಿರುದ್ಧ ಹರಿಹಾಯ್ದರು.
ಕಲ್ಯಾಣ ಕರ್ನಾಟಕದಲ್ಲಿ, ಅದೂ ನಮ್ಮ ಜಿಲ್ಲೆಯಲ್ಲಿ ವಲಸೆ ಹೆಚ್ಚಿದೆ. ಪ್ರಧಾನಿ ನರೇಂದ್ರ ಮೋದಿ ಅವರು 7 ಜವಳಿ ಪಾರ್ಕ್‍ಗಳಲ್ಲಿ ಒಂದನ್ನು ನಮಗೆ ಕೊಟ್ಟಿದ್ದಾರೆ. ಮೆಗಾ ಟೆಕ್ಸ್‍ಟೈಲ್ ಪಾರ್ಕ್ ಸ್ಥಾಪಿಸುತ್ತೇವೆ. ರಾಜ್ಯದ ಜವಳಿ ಸಚಿವ ಶಿವಾನಂದ್ ಪಾಟೀಲ್ ಅವರಿಗೂ ನಾವು ಮನವರಿಕೆ ಮಾಡಿಕೊಟ್ಟಿದ್ದೇವೆ. ಟೆಂಡರ್ ಕರೆಯುತ್ತಿದ್ದಾರೆ. ಒಂದು ಲಕ್ಷ ಜನರಿಗೆ ಇದರಿಂದ ಕೆಲಸ ಸಿಗಲಿದೆ. ಇಂತಹ ಐತಿಹಾಸಿಕ ಕೆಲಸವನ್ನು ಮೋದಿಯವರು ಕೊಟ್ಟಿದ್ದಾರೆ. ಆ ಕುರಿತು ಜನರಿಗೆ ತಲುಪಿಸಬೇಕು ಎಂದು ಅವರು ಕಾರ್ಯಕರ್ತರಿಗೆ ಹೇಳಿದರು.
ನನ್ನ ಅವಧಿಯಲ್ಲಿಯೇ ಸುಮಾರ 71 ಕಿಲೋಮೀಟರ್ 1500 ಕೋಟಿ ರೂ.ಗಳದ ಭಾರತ್ ಮಾಲಾ ರಸ್ತೆಯನ್ನು ಮೋದಿ ಅವರು ಕೊಟ್ಟಿದ್ದಾರೆ. ಸಿಂಗಪೂರದಲ್ಲಿ ಅಂತಹ ರಸ್ತೆ ಇಲ್ಲ. ವೀಕ್ಷಣೆ ಮಾಡಿದ್ದೇವೆ. ಜಲಜೀವನ್ ಮಿಷನ್ ಯೋಜನೆಯಡಿ 265 ಕೋಟಿ ರೂ.ಗಳು ಜೇವರ್ಗಿಗೆ ಸಿಗುತ್ತದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯಸಿಂಗ್ ಅವರು ಹೇಳಿದ್ದಾರೆ. ಅದು ಕೇಂದ್ರದ ಅನುದಾನ. ಚಿತ್ತಾಪುರಕ್ಕೆ ಸನ್ನತಿ ಸೇರಿ 120 ಗ್ರಾಮಗಳಿಗೆ ಬೆಣ್ಣೆತೊರಾ ನೀರು ಪೂರೈಸುವ 2000 ಕೋಟಿ ರೂ.ಗಳ ಕೆಲಸವಾಗಿದೆ. ಬಹು ವರ್ಷಗಳ ಬೇಡಿಕೆಯಾದ ನೀಲೂರ್ ಸೇತುವೆ ಆಗಿದೆ. ಈ ಸಂಬಂಧ ಅಲ್ಲಿನ 10,000 ಜನ ಹೋರಾಟ ಮಾಡಿದ್ದರು. ಕಾಂಗ್ರೆಸ್ ಅವಧಿಯಲ್ಲಿ ಆ ಕೆಲಸ ಆಗಿರಲಿಲ್ಲ. ನಾವು ವಿಶೇಷ ನಿಧಿ ತೆಗೆದುಕೊಂಡು ಮಾಡಿದ್ದೇವೆ. ಇಂತಹ ಕೆಲಸಗಳ ಕುರಿತು ಚರ್ಚೆಗೆ ಬನ್ನಿ ಎಂದು ಅವರು ಕಾಂಗ್ರೆಸ್ಸಿನವರಿಗೆ ನೇರ ಸವಾಲು ಹಾಕಿದರು.
ನಗರದಲ್ಲಿನ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿದ್ದ ಡಾ. ಎಂ.ಆರ್. ತಂಗಾ ಅವರಿದ್ದ ಸಂದರ್ಭದಲ್ಲಿ ಸರಡಗಿ ಬಳಿ ಜಾಗ ತೆಗೆದುಕೊಳ್ಳಲಾಯಿತು. ಬಿ.ಎಸ್. ಯಡಿಯೂರಪ್ಪ ಅವರು ಕಾಮಗಾರಿಗೆ ಗುದ್ದಲಿಪೂಜೆ ಮಾಡಿ ಅನುದಾನ ಒದಗಿಸಿ, ವಿಮಾನ ಹಾರಾಟವನ್ನು ಪ್ರಾರಂಭಿಸಿದರು. ಈಗ ನಮ್ಮ ನಿಲ್ದಾಣದಿಂದ ರಾತ್ರಿ ವಿಮಾನ ಹಾರಾಟ ಆರಂಭಗೊಂಡಿದೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಇಎಸ್‍ಐಯಲ್ಲಿ ಸುಧಾರಣೆ ತರಲಾಗಿದೆ ಎಂದು ಸಂಸದ ಜಾಧವ್ ಅವರು ತಮ್ಮ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು.
ರಾಜಕೀಯವಾಗಿ ಕಾಂಗ್ರೆಸ್ಸಿನವರು ಎಲ್ಲವನ್ನೂ ಮಾಡಿದ್ದೇವೆ ಎಂದು ಹೇಳುತ್ತಾರೆ. ಅವರಿಂದ ಆದಾಯ ಹೆಚ್ಚಿಲ್ಲ. ಮೋದಿಯವರಿಂದ ಈಗ ಎಲ್ಲವೂ ಆಗುತ್ತಿದೆ. ಐತಿಹಾಸಿಕ ರಾಮ ಮಂದಿರ ನಿರ್ಮಾಣವಾಗಿದೆ ಎಂದು ತಿಳಿಸಿದ ಅವರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಯಾರೂ ಭಿನ್ನಾಭಿಪ್ರಾಯ ಹೊಂದಬಾರದು. ಹಿಂದಿನದನ್ನು ಮರೆತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಹಿಂದಿನ ಚುನಾವಣೆಯಲ್ಲಿನ ಅಸಮಾಧಾನ ಹೊಂದಿದ ಕಾರ್ಯಕರ್ತರನ್ನು ರಾಜುಗೌಡರು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪಕ್ಷವನ್ನು ವಿಭಜಿಸಲು ಪ್ರಯತ್ನಿಸುತ್ತಾರೆ. ಅದಕ್ಕೆ ಅವಕಾಶ ಕೊಡಬೇಡಿ. ನಮ್ಮ ಲಕ್ಷ್ಯ ಕಲಬುರ್ಗಿ ಗೆಲ್ಲುವುದು ಮಹತ್ವದ್ದು. ವಿರೋಧ ಪಕ್ಷದವರು ಇದ್ದಾರೆ. ಅವರೂ ಎಲ್ಲ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ನಮ್ಮನ್ನು ಸೋಲಿಸಲು ಯತ್ನಿಸುತ್ತಾರೆ. ಅದನ್ನೆಲ್ಲ ಹಿಮ್ಮೆಟ್ಟಿಸಬೇಕು ಎಂದು ಅವರು ಹೇಳಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ದೇಶದ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಜಗತ್ತಿನಲ್ಲಿಯೇ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಐದನೇ ಸ್ಥಾನದಲ್ಲಿದ್ದು, ಭಾರತವು ಮತ್ತೆ ಮೂರನೇ ಸ್ಥಾನವನ್ನು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮುಂದೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಇದೆ. ರಾಜ್ಯದಲ್ಲಿ ನಮ್ಮ ಸರ್ಕಾರವಿಲ್ಲ. ಹೀಗಾಗಿ ಕಾಂಗ್ರೆಸ್ಸಿನವರು ನಮ್ಮ ಮೇಲೆ ದೂರು ದಾಖಲಿಸುತ್ತಾರೆ. ಅದಕ್ಕೆಲ್ಲ ನೀವು ಆತಂಕಕ್ಕೆ ಒಳಗಾಗದೇ ನಾವು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.
ನೀವು ರಾಜರು, ಹೋರಾಟ ಮಾಡಿದವರು ಇದ್ದೀರಿ. ಯುದ್ಧ ಮಾಡಿದ್ದೀರಿ. ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ನೀವು ಗೆಲ್ಲಿಸಿದ್ದು ಮರೆಯಲಾರೆವು ಎಂದು ರಾಜುಗೌಡರಿಗೆ ಉದ್ದೇಶಿಸಿ ಹೇಳಿದ ಜಾಧವ್ ಅವರು, ನಮ್ಮ ಮೇಲೆ ಬಿದ್ದವರಿಗೆ ನಾವು ಸುಮ್ಮನೇ ಬಿಡದೇ ಅಂಜಿಸುತ್ತೇವೆ. ನಾವು ಎಲ್ಲ ರೀತಿಯಿಂದಲೂ ಬಲಾಢ್ಯರಿದ್ದೇವೆ. ಕಾರ್ಯಕರ್ತರು ಯಾವುದಕ್ಕೂ ಅಂಜದೇ ಅಳುಕದೇ ಬಿಜೆಪಿಯನ್ನು ಗೆಲ್ಲಿಸುವ ದಿಸೆಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಮನವಿ ಮಾಡಿದರು.
ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಹ್ಯಾಟ್ರಿಕ್ ಸಾಧನೆ ಮಾಡುವುದು ಖಚಿತ. ಕ್ಷೇತ್ರದಲ್ಲಿ ಕಳೆದ ಬಾರಿ ಒಂದು ಲಕ್ಷದಿಂದ ಆಶೀರ್ವಾದ ಮಾಡಿ ಗೆಲ್ಲಿಸಿದ್ದೀರಿ. ಈ ಬಾರಿ ಒಂದೂವರೆ ಲಕ್ಷಕ್ಕಿಂತ ಅಧಿಕ ಮತಗಳಿಂದ ಬಿಜೆಪಿಯನ್ನು ಗೆಲ್ಲಿಸಲು ನಿರ್ಧರಿಸಿದ್ದೇವೆ ಎಂದರು.
ನಮ್ಮೆಲ್ಲ ಕಾರ್ಯಕರ್ತರು 15 ತಾಸುಗಳ ಅವಧಿಯವರೆಗೆ 80 ದಿನಗಳ ಕಾಲ ಕೆಲಸ ಮಾಡಬೇಕು. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಆ ರೀತಿ ಕರೆ ನೀಡಿದ್ದು, ತಾವೂ ಸಹ 16 ತಾಸು ತಾವು ದುಡಿಯುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಮನೆ, ಮಾರು ಬಿಟ್ಟು ಪಕ್ಷ ಬಲಪಡಿಸಬೇಕು. ಲೋಕಸಭಾ ಚುನಾವಣೆಯ ಉಸ್ತುವಾರಿಗಳನ್ನಾಗಿ ರಾಜುಗೌಡರು ನೇಮಕ ಮಾಡಿದ್ದರಿಂದ ಪಕ್ಷಕ್ಕೆ ಶಕ್ತಿ ತಂದಿದೆ ಎಂದು ಸಂತೋಷ ವ್ಯಕ್ತಪಡಿಸಿದರು.