ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗಣಿನಾಡಿನಲ್ಲಿ 46 ಕಿ.ಮೀ.ಮಾನವ ಸರಪಳಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಸೆ‌15 ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಪ್ರಜಾ ಪ್ರಭುತ್ವದ ಆಶಯಗಳಾದ ಸಮಾನತೆ, ಏಕತೆ, ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಇಂದು ಗಣಿ ನಾಡು ಬಳ್ಳಾರಿ ‌ಜಿಲ್ಲೆಯಲ್ಲಿ 46 ಕಿಲೋ ಮೀಟರ್  ಬೃಹತ್ ಮಾನವ ಸರಪಳಿ ರಚಿಸಲಾಗಿತ್ತು.
ಜಿಲ್ಲೆಯ ಸಂಡೂರು ತಾಲೂಕಿನ  ಕುರೆಕುಪ್ಪದಿಂದ  ಚಿತ್ರದುರ್ಗ ಜಿಲ್ಲೆಯ ಮೇಲಿನ ಕಣವೆ ಗ್ರಾಮದ ವರೆಗೆ 35 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡು ಕೈ ಕೈ ಹಿಡಿದು ಮಾನವ ಸರಪಳಿ‌ ರಚಿಸಿದ್ದರು.
ಜಿಲ್ಲೆಯ 20 ಸಾವಿರ ಶಾಲಾ ಮಕ್ಕಳು ಸೇರಿದಂತೆ ಕಾರ್ಮಿಕರು,  ಸಂಘ ಸಮಸ್ಥೆಗಳ ಪದಾಧಿಕಾರಿಗಳು, ಕಾರ್ಯಕರ್ತರು, ಸದಸ್ಯರು, ಜನಪ್ರತಿನಿಧಿಗಳು, ಸಾರ್ವಜನಿಕರು  ಭಾಗಿಯಾಗಿದ್ದರು.  2 ಕಿಲೋ ಮೀಟರ್ ಉದ್ದದ ರಾಷ್ಟ್ರ ಧ್ವಜ ಮಾದರಿ ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು. ಅಲ್ಲದೆ ಎರೆಡು ಸಾವಿರ ಸಸಿ ನೆಡಲಾಯ್ತು.
ಸಂಡೂರು ತಾಲೂಕಿನ ಬನ್ನಿಹಟ್ಟಿ ಶಾಲೆಯಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಂಸದ ಈ.ತುಕರಾಂ,  ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ, ಜಿಪಂ ಸಿಈಓ ರಾಹುಲ್ ಶರಣಪ್ಪ ಸಂಕನೂರು ಡಿಐಜಿ ಲೋಕೇಶ್,   ಎಸ್ಪಿ ಡಾ.ಶೋಭಾರಾಣಿ,
 ಮೊದಲಾದವರು ಪಾಲ್ಗೊಂಡು ಪ್ರಜಾಪ್ರಭುತ್ವದ ಆಶಯಗಳನ್ನು ನಾವೆಲ್ಲ ಪಾಲಿಸೋಣ ಎಂದು ಪ್ರಮಾಣ ವಚನ ಮಾಡಲಾಯ್ತು.
ಈ ವೇಳೆ ವಿವಿದ ಜನಪದ ಕಲಾ ತಂಡಗಳ ಕಲಾ ಪ್ರದರ್ಶನದಲ್ಲಿ ಡೊಳ್ಳು ಬಾರಿಸುವುದರಲ್ಲಿ ಪಾಲ್ಗೊಂಡ ಸಂಸದ ತುಕರಾಂ ತಾಳ ಹಾಕುತ್ತ ಡೊಳ್ಳಿನ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕಿ,  ಕೆಲ‌ ಮಕ್ಕಳು ಹುಲಿ ವೇಷಧಾರಿಗಳಾಗಿ, ಭಾರತ ಭಾವುಟ ಹಿಡಿದು ಮಾನವ ಸರಪಳಿ ರಚಿದ್ದು ಸಹ  ಗಮನ ಸೆಳೆಯಿತು.