ನಕಲಿ ವೆಬ್‍ಸೈಟ್ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
ಕಲಬುರಗಿ,ಸೆ.15-ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ದೇವಲಗಾಣಗಾಪುರದ ಅರ್ಚಕರ ವಿರುದ್ಧ ದಾಖಲಿಸಲಾಗಿದ್ದ ನಕಲಿ ವೆಬ್‍ಸೈಟ್ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಆಗಿನ ಜಿಲ್ಲಾಧಿಕಾರಿ ಯಶವಂತ ಗುರುಕರ ಅವರು 23 ಜೂನ್ 2022 ರಂದು ದೇವಸ್ಥಾನದ ಅಭಿವೃದ್ಧಿ ಸಭೆ ನಡೆಸುತ್ತಿದ್ದಾಗ ಕೆಲವು ನಕಲಿ ವೆಬ್ಸೈಟ್‍ಗಳನ್ನು ತೆರೆದು ದೇವಸ್ಥಾನದ ಹೆಸರಿನಲ್ಲಿ ಪೂಜೆಗೆ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ದೇವಸ್ಥಾನದ ಐವರು ಅರ್ಚಕರ ವಿರುದ್ಧ ದೂರು ದಾಖಲಿಸಲು ನಿರ್ದೇಶನ ನೀಡಿದ್ದರು. ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಐವರು ಅರ್ಚಕರ ವಿರುದ್ಧ ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ ಈ ಅಪರಾಧ ಆರ್ಥಿಕ ಅಪರಾಧವೆಂದು ಪರಿಗಣಿಸಿ ಪ್ರಕರಣವನ್ನು ಸಿಇಎನ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಸಿಇಎನ್ ಪೊಲೀಸರು ಸುಮಾರು 6 ತಿಂಗಳಕಾಲ ವಿಚಾರಣೆ ನಡೆಸಿ ಸುಮಾರು 1085 ಪುಟಗಳ ಜಾರ್ಜ್‍ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಾಧೀಶ ಹೇಮಂತ ಚಂದನಗೌಡರ್ ಅವರು, ಅರ್ಚಕರ ವೆಬ್ಸೈಟ್ ಹೆಸರು ಮತ್ತು ದೇವಸ್ಥಾನದ ಅಧಿಕೃತ ವೆಬ್ಸೈಟ್ ಡೊಮೈನ್ ಹೆಸರಿನಲ್ಲಿ ಯಾವುದೇ ಸಾಮ್ಯತೆ ಇಲ್ಲದಿರುವುದು ಮತ್ತು ಸರ್ಕಾರಿ ವೆಬ್ಸೈಟ್‍ಗಳ ಪ್ರತಿರೂಪ ಮಾಹಿತಿಯನ್ನು ಅರ್ಚಕರು ತಮ್ಮ ವೆಬ್ಸೈಟ್‍ನಲ್ಲಿ ಪ್ರಸ್ತಾಪಿಸಿರುವುದಿಲ್ಲ. ಹೀಗಾಗಿ ನಕಲಿ ವೆಬ್ಸೈಟ್ ಅಥವಾ ಪ್ರತಿರೂಪದ ವೆಬ್ಸೈಟ್ ಎಂಬ ಆರೋಪ ಸಾಬೀತಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರಕರಣವು ರದ್ದುಗೊಳಿಸಲು ಅರ್ಹ ಎಂದು ಪರಿಗಣಿಸಿ ಪ್ರಕರಣವನ್ನು ರದ್ದುಗೊಳಿಸಿದ್ದಾರೆ ಎಂದು ದೇವಸ್ಥಾನದ ಅರ್ಚಕ ವಲ್ಲಭ ದಿನಕರಭಟ್ ಪೂಜಾರಿ ತಿಳಿಸಿದ್ದಾರೆ.