ಮಾನವ ಸರಪಳಿ ಸಂಬಂಧ ಬೆಸೆಯಲು ಸಹಕಾರಿ
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.15: ಮಾನವ ಸರಪಳಿ ಜನರಲ್ಲಿ ನೈಜ ಸಂಬಂಧ ಬೆಸೆಯುವ ವಿನೂತನ ಕಾರ್ಯಕ್ರಮವಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಅಭಿಪ್ರಾಯ ಪಟ್ಟರು.
ಇಂದು ನಡೆಯುತ್ತಿರುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ  ಪ್ರಯುಕ್ತ ಪ್ರಜಾಪ್ರಭುತ್ವ ಉಳಿವಿಗಾಗಿ ಹಮ್ಮಿಕೊಂಡಿದ್ದ ಮಾನವ ಸರಪಳಿ ಯು.ರಾಜಾಪುರ ಸಂಡೂರು ಜನರೊಂದಿಗೆ ಹೆಜ್ಜೆ ಹಾಕುತ್ತಾ ಮಾತನಾಡಿದ ಅವರು ಕರುನಾಡಿನ ಜನರ ಪಾಲಿಗೆ ಪ್ರಜಾಪ್ರಭುತ್ವದ ಜಾತ್ರೆಯಂತಿದೆ.
ಜಿಲ್ಲೆಯ ಗಡಿಭಾಗದ ಜನರಿಗೆ, ಹಿಂದುಳಿದ ಹಳ್ಳಿ ಜನರಿಗೆ ಪ್ರಜಾಪ್ರಭುತ್ವದ ನಿಜವಾದ ಅರ್ಥ ತಿಳಿಯಲು ಅವಕಾಶ ಸಿಕ್ಕಂತಾಗಿದೆ. ಜೊತೆಗೆ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಜೊತೆಗೆ ಪೀಠಿಕೆಯ ಗುರಿ ಉದ್ದೇಶಗಳನ್ನು ಅರಿಯಲು ಸಹಕಾರಿಯಾಗಿದೆ.
ಮಾನವ ಸರಪಳಿಯಲ್ಲಿ ಪಾಲ್ಗೊಂಡ ಯುವಕರ ಹಾಗೂ ಜನರ ಕೈಯಲ್ಲಿ ತ್ರಿವರ್ಣ ಧ್ವಜ ರಾರಾಜಿಸುತ್ತ,ದೇಶ ಭಕ್ತಿಯ ಸಂದೇಶ ಸಾರುವಂತಿತ್ತು.
ಹಳ್ಳಿಗಳಲ್ಲಿ ಜನ ಸ್ವಯಂ ಪ್ರೇರಿತರಾಗಿ ಪಾಲ್ಗೊಂಡಿದ್ದು ವಿಶೇಷವಾಗಿ ಕಂಡುಬಂತ್ತು.
ಶಿಕ್ಷಕರಾದ ಎಸ್. ರಾಮಾಂಜನೇಯ ಹಾಗೂ ಯು.ರಾಜಾಪುರ ಜನ ಮುಂತಾದವರು ಉಪಸ್ಥಿತರಿದ್ದರು.