ಶಿಕ್ಷಕ ಹುದ್ದೆಯಲ್ಲಿ ಸಂತೃಪ್ತಿ ಕಂಡಿದ್ದ ರಾಧಾಕೃಷ್ಣನ್
ಬೀದರ್: ಸೆ.15:ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕ ಹುದ್ದೆಯಲ್ಲೇ ಸಂತೃಪ್ತಿ ಕಂಡಿದ್ದರು ಎಂದು ಸಾಹಿತಿ, ಪ್ರೌಢಶಾಲಾ ಶಿಕ್ಷಕಿ ಶ್ರೀದೇವಿ ವಿ. ಪಾಟೀಲ ಹೇಳಿದರು.
ಅಕ್ಕ ಮಹಾದೇವಿ ಮಹಿಳಾ ಸ್ವ ಸಹಾಯ ಸಂಘದ ವತಿಯಿಂದ ನಗರದ ಗುಮ್ಮೆ ಕಾಲೊನಿಯಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಧಾಕೃಷ್ಣನ್ ದೇಶದ ರಾಷ್ಟ್ರಪತಿಯಂತಹ ಅತ್ಯುನ್ನತ ಹುದ್ದೆ ಅಲಂಕರಿಸಿದ್ದರು. ಪ್ರಾಧ್ಯಾಪಕ, ಕುಲಪತಿ, ಉಪ ರಾಷ್ಟ್ರಪತಿ ಮತ್ತಿತರ ಹುದ್ದೆಗಳಲ್ಲೂ ಕಾರ್ಯ ನಿರ್ವಹಿಸಿದ್ದರು. ಆದರೆ, ಪತ್ರಕರ್ತರೊಬ್ಬರು ಯಾವ ಹುದ್ದೆ ಖುಷಿ ಕೊಟ್ಟಿದೆ ಎಂದು ಪ್ರಶ್ನಿಸಿದಾಗ, ಶಿಕ್ಷಕ ಹುದ್ದೆ ಸಮಾಧಾನ ಹಾಗೂ ಸಂತೃಪ್ತಿ ಕೊಟ್ಟಿದೆ ಎಂದು ಉತ್ತರಿಸಿದ್ದರೆಂದು ತಿಳಿಸಿದರು.
ಶಿಕ್ಷಕ ಹುದ್ದೆ ಬಹಳ ಪವಿತ್ರವಾದದ್ದು. ಹೀಗಾಗಿ ಮನಃಪೂರ್ವಕ ಸೇವೆ ಸಲ್ಲಿಸ ಬಯಸುವವರಷ್ಟೇ ಈ ಹುದ್ದೆಗೆ ಬರಬೇಕು. ನೌಕರಿ ಸಿಗಲಿಲ್ಲವೆಂಬ ಕಾರಣಕ್ಕೆ ಹುದ್ದೆಗೆ ಸೇರಿದರೆ ಉತ್ತಮ ಶಿಕ್ಷಕರಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಶಿಕ್ಷಕರಾದವರು ಮಕ್ಕಳಲ್ಲಿನ ಅಜ್ಞಾನದ ಕತ್ತಲೆಯನ್ನು ಕಳೆದು, ಜ್ಞಾನದ ಜ್ಯೋತಿ ಬೆಳಗಿಸಬೇಕು. ಅವರಲ್ಲಿ ಅಡಗಿರುವ ಸೂಪ್ತ ಪ್ರತಿಭೆಯನ್ನು ಹೊರ ತೆಗೆಯಬೇಕು. ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ರೂಪಿಸಬೇಕು ಎಂದು ತಿಳಿಸಿದರು.
ಶಿಕ್ಷಕಿಯರಾದ ವಿಜಯಲಕ್ಷ್ಮಿ ಪರಸಾಣೆ, ಚಂದ್ರಕಲಾ ಮೇತ್ರೆ ಹಾಗೂ ಕರುಣಾ ಕ್ಯಾಸಾ ಅವರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷೆ ಸುರೇಖಾ ಫುಲೇಕರ್ ಅಧ್ಯಕ್ಷತೆ ವಹಿಸಿದ್ದರು. ಚಿಟಗುಪ್ಪದ ಗೌರಿಬಾಯಿ ಅಗ್ರವಾಲ್ ಪದವಿಪೂರ್ವ ಕಾಲೇಜು ಪ್ರಾಚಾರ್ಯ ವಿಜಯಕುಮಾರ ಕೆ. ಪಾಟೀಲ, ಪೆÇಲೀಸ್ ಇಲಾಖೆಯ ನಿವೃತ್ತ ಅಧಿಕಾರಿ ಗುಂಡಪ್ಪ ಫುಲೆಕರ್, ಶಿಕ್ಷಕ ವೆಂಕಟರಾವ್ ಸಿಂಧೆ, ನಿವೃತ್ತ ಶಿಕ್ಷಕರಾದ ಶಿವಕುಮಾರ ನಾವದಗೆ, ಕಾಶೀನಾಥ ತಂಗಾ ಇದ್ದರು.
ಗೀತಾ ಮಹಾಂತೇಶ ಸ್ವಾಗತಿಸಿದರು. ವೈಜಿನಾಥ ಪಾಟೀಲ ನಿರೂಪಿಸಿದರು. ಶಿಲ್ಪಾ ಮಜಗೆ ವಂದಿಸಿದರು.