ಜೆ.ಜೆ.ಎಮ್ ಯೋಜನೆ ಕಳಪೆ ಮಟ್ಟದ ಕಾಮಗಾರಿ: ತನಿಖೆಗೆ ಆಗ್ರಹ
ಬೀದರ್:ಸೆ.15: ಔರಾದ(ಬಾ) ತಾಲೂಕಿನಲ್ಲಿ ಬರುವ ನಿಡೋದಾ, ಬೇಡಕುಂದಾ, ಬಳತ (ಬಿ) ಬಳತ (ಕೆ), ನಾಗೂರ (ಎಮ್), ಹೆಡಗಾಪೂರ, ರಕ್ಷಾಳ, ಆಲೂರ(ಕೆ), ಬೋರಾಳ, ಅಲ್ಲಾಪೂರ, ಸಂತಪೂರ, ಬಲ್ಲೂರ, ಸುಂಧಾಳ, ಮಮದಾಪೂರ, ಕೌಡಗಾಂವ, ಕೌಠಾ, ಜವಲ ತಾಂಡಾ, ಕಾರಬಾರ ತಾಂಡ, ಮಾರಜೂ ತಾಂಡಾ ಹೀಗೆ ಹಲವಾರು ಗ್ರಾಮಗಳಲ್ಲಿ ಜಲ ಜೀವನ ಮೀಷನ್ (ಜೆ.ಜಿ.ಎಮ್) ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು ಕಾಮಗಾರಿ ಕೈಗೊಂಡಿರುವವರ ವಿರೂದ್ಧ ತನಿಖೆ ಮಾಡುವಂತೆ ಹಾಗೂ ಸಂಬಂಧಪಟ್ಟ ಗುತ್ತಿಗೆದಾರರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಕರ್ನಾಟಕ ಪ್ರಜಾಶಕ್ತಿ ಸಮಿತಿ ಸಂಘಟನೆ ಪ್ರಮುಖರು ಒತ್ತಾಯಿಸಿದ್ದಾರೆ.
ನಗರದಲ್ಲಿ ನಿನ್ನೆ ಈ ಕುರಿತು ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಾರ್ಯನಿರ್ವಾಹಕ ಅಭಿಯಂತರರು ಬೀದರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಔರಾದ (ಬಾ), ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು ಕಳೆಪೆ ಮಟ್ಟದಿಂದ ಕಾಮಗಾರಿ ನಿರ್ಮಾಣ ಮಾಡಿರುವ ಕಾರಣ ಮಳೆಗಾಲ ಇದ್ದರೂ ಕೂಡ ಕೆಲವೊಂದು ಗ್ರಾಮಗಳಿಗೆ ನೀರು ಸರಬರಾಜು ಆಗುತ್ತಿಲ್ಲ. ಕೆಲವೊಂದು ಗ್ರಾಮಗಳಲ್ಲಿ ಜಲ ಜೀವನ ಮೀಷನ್(ಜೆ.ಜಿ.ಎಮ್) ಯೋಜನೆಯಡಿಯಲ್ಲಿ ಸಂಪೂರ್ಣ ಕಾಮಗಾರಿ ಮಾಡದೇ ನಕಲಿ ಬಿಲ್ಲನ್ನು ಸೃಷ್ಠಿ ಮಾಡಿ ಸರ್ಕಾರದ ಕೋಟ್ಯಾಂತರ ಹಣ ಲೂಟಿ ಮಾಡಿರುತ್ತಾರೆ ಎಂದು ಮನವಿ ಪತ್ರದಲ್ಲಿ ಗಂಭೀರವಾಗಿ ಆರೋಪಿಸಿದ್ದಾರೆ.
ಈಗಾಲೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸುಮಾರು ಸಲ ಖುದ್ದಾಗಿ ಈ ಕಳಪೆ ಮಟ್ಟದ ಕಾಮಗಾರಿ ಬಗ್ಗೆ ಕುಲಂಕುಷವಾಗಿ ಪರಿಶೀಲನೆ ಮಾಡುವಂತೆ ಮನವಿ ಮಾಡಿದರೂ ಸಿ.ಇ.ಒ ಅವರು ಯಾವುದೇ ಗ್ರಾಮಕ್ಕೂ ಖುದ್ದಾಗಿ ಭೇಟಿಕೊಟ್ಟು ಪರಿಶೀಲನೆ ಸಹ ಮಾಡಿರುವುದಿಲ್ಲ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಮತ್ತು ಗುತ್ತಿಗೆದಾರರ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಂಡಿರುವುದಿಲ್ಲ.ಎಂದು ದೂರಿದ್ದಾರೆ.
ಈ ಕೂಡಲೇ ಉನ್ನತ ಮಟ್ಟದ ತನಿಖೆ ತಂಡ ರಚಿಸಿ ತಪ್ಪಿತಸ್ತ ಅಧಿಕಾರಿಗಳ ಮೇಲೆ ಹಾಗೂ ಗುತ್ತಿಗೆದಾರರ ಮೇಲೆ ಕಾನೂನಿನ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಗುತ್ತಿಗೆದಾರರ ಪರವಾನಿಗೆ ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿರುವ ಪ್ರತಿಭಟನಾಕಾರರು, ಒಂದು ವೇಳೆ ಒಂದು ವಾರದೋಳಗಾಗಿ ಸಂಬಂಧಪಟ್ಟವರ ವಿರೂದ್ಧ ಕ್ರಮ ಕೋಗೊಳ್ಳದೇ ಹೋದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿ ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಜಾಶಕ್ತಿ ಸಮಿತಿ ಜಿಲ್ಲಾಧ್ಯಕ್ಷರಾದ ಸಾಯಿ ಶಿಂಧೆ, ನಗರ ಘಟಕದ ಅಧ್ಯಕ್ಷ ವಿನೋದ ಶಿಂಧೆ, ಉಪಾಧ್ಯಕ್ಷರಾದ ಮಹೇಂದ್ರಕುಮಾರ ಹೊಸಮನಿ, ಶಿವ ಬೇಲೂರೆ, ಆಕಾಶ ತ್ರಿಮುಖೆ, ಧನರಾಜ ಮೇತ್ರೆ, ಗುರು ನೇಮತಾಬಾದ, ಸಂದೀಪ ಕಾಂಟೆ, ಸಂಗಮೇಶ ಭಾವಿದೊಡ್ಡಿ, ಜೈಭೀಮ ಖ್ಯಾದೆ, ಗೌತಮ ಪ್ರಸಾದ, ಅಖೀಲೇಶ ಸಾಗರ ಹಾಗೂ ಇತರರು ಉಪಸ್ಥಿತರಿದ್ದರು.