ಕನ್ನಡದಲ್ಲೇ ಬ್ಯಾಂಕಿಂಗ್ ಸೇವೆಗೆ ಒತ್ತಾಯ
ಬೀದರ್:ಸೆ.15: ಜಿಲ್ಲೆಯಲ್ಲಿ ಬ್ಯಾಂಕಿಂಗ್ ಸೇವೆಯನ್ನು ಕನ್ನಡದಲ್ಲೇ ಒದಗಿಸಬೇಕು ಎಂದು ನಮ್ಮ ಕರ್ನಾಟಕ ಸೇನೆ ಒತ್ತಾಯಿಸಿದೆ.
ಸೇನೆಯ ಪದಾಧಿಕಾರಿಗಳು ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಲೀಡ್ ಬ್ಯಾಂಕ್ ವ್ಯವಸ್ಥಾಪಕರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಬ್ಯಾಂಕಗಳಲ್ಲಿ ಹಿಂದಿ ಭಾಷೆಗೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿರುವುದು ಸರಿಯಲ್ಲ. ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕರ್ನಾಟಕದ ಬ್ಯಾಂಕಗಳಲ್ಲಿ ಕನ್ನಡಿಗರಿಗೇ ಉದ್ಯೋಗ ಕಲ್ಪಿಸಬೇಕು. ಚೆಕ್, ಖಾತೆ ಪುಸ್ತಕ ಹಾಗೂ ಅರ್ಜಿ ನಮೂನೆಗಳನ್ನು ಕನ್ನಡದಲ್ಲಿ ಮುದ್ರಿಸಬೇಕು. ಗ್ರಾಹಕರೊಂದಿಗೆ ಕನ್ನಡದಲ್ಲೇ ವ್ಯವಹರಿಸಬೇಕು. ಬ್ಯಾಂಕಗಳ ನಾಮಫಲಕ, ಸೂಚನಾ ಫಲಕಗಳಲ್ಲಿ ಶೇ 60 ರಷ್ಟು ಭಾಗದಲ್ಲಿ ಕನ್ನಡ ಬಳಸಬೇಕು. ಬ್ಯಾಂಕಗಳ ಕನ್ನಡ ಬಾರದ ಸಿಬ್ಬಂದಿಯನ್ನು ಅವರ ಮಾತೃಭಾಷೆಯ ರಾಜ್ಯಗಳಿಗೆ ವರ್ಗಾಯಿಸಬೇಕು. ಹಿಂದಿ ದಿವಸ್, ಹಿಂದಿ ಸಪ್ತಾಹವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಸೇನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಜು ಯಾದವ್, ಸಂಘಟನಾ ಕಾರ್ಯದರ್ಶಿಗಳಾದ ಗಿರೀಶ್ ಬಿರಾದಾರ, ಜಿತೇಂದ್ರ ರಾಠೋಡ್, ಮುಖಂಡರಾದ ಅನಿಲ್ ರಾಜಗೀರಾ, ಸಂತೋಷ ಪಾಟೀಲ, ಬಸವರಾಜ ಕಾರಬಾರಿ, ರಾಜಕುಮಾರ ಕೋಟೆ ಇದ್ದರು.