ಹಿಂದೂ ಮುಸ್ಲಿಂ ಭಾವೈಕ್ಯ ಸಾರಿದ ಗಣೇಶ ಉತ್ಸವ :ಯುವಕರಿಂದ ರಕ್ತದಾನ ಮಾಡಿ ಭಕ್ತಿ ಸಮರ್ಪಣೆ
ಔರಾದ :ಸೆ.15: ಪಟ್ಟಣದ ಮಾತಾ ಮಾಣಿಕೇಶ್ವರಿ ಬಡಾವಣೆಯ ಹಿಂದೂ ಮಹಾ ಗಣೇಶ ಮಂಡಳಿಯು ಕಳೆದ 11 ವರ್ಷಗಳಿಂದ ಈ ರೀತಿಯ ಗಣೇಶೋತ್ಸವವನ್ನು ಆಚರಿಸುತ್ತಿದ್ದು, ಈ ಬಾರಿಯೂ ಭಾವೈಕ್ಯತೆಯ ಗಣೇಶೋತ್ಸವಕ್ಕೆ ಮುನ್ನುಡಿ ಬರೆದಿರುವ ಯುವಕರ ಈ ಕಾರ್ಯಕ್ಕೆ ಎಲ್ಲೆಡೆ ಈಗ ಪ್ರಶಂಷೆ ವ್ಯಕ್ತವಾಗಿದೆ. ಬೇಧ ಭಾವ ಮರೆತು ಎಲ್ಲರೂ ಒಂದೇ ಎಂಬ ಭಾವನೆಯಿಂದ ಹಿಂದೂಗಳು ಮುಸ್ಲಿಂ ಬಾಂಧವರು ಗಣೇಶೋತ್ಸವವನ್ನು ಆಚರಿಸಿ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.
11ನೇ ವರ್ಷದ ವರ್ಷಾಚರಣೆ ನಿಮಿತ್ತ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಸೇರಿ ರಕ್ತದಾನ ಮಾಡಿ ಸಮಾಜಕ್ಕೆ ನಾವೆಲ್ಲ ಒಂದೇ ಎಂಬ ಸಂದೇಶ ನೀಡಿದರು. ಅದೇ ರೀತಿಯಾಗಿ ಸತತವಾಗಿ ಏಳು ದಿನಗಳ ಕಾಲ ಪೂಜಾ ಕಾರ್ಯಕ್ರಮ ಸೇರಿದಂತೆ ಮಹಾ ಪ್ರಸಾದ ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಂ ಸಹೋದರರು ಭಾಗಿಯಾದರು. ಬಡಾವಣೆಯ ಮೋಸಿನ್ ಪಟೇಲ ಅವರು ಭಕ್ತರಿಗೆ ಮಹಾ ಪ್ರಸಾದ ವ್ಯವಸ್ಥೆ ಮಾಡಿದರು. ಒಂದೆಡೆ ರಾಜ್ಯದಲ್ಲಿ ನಾಗಮಂಗಲ ಕೋಮು ಗಲಭೆ ನಡೆಯುತ್ತಿದೆ ಇತ್ತ ಗಡಿ ಜಿಲ್ಲೆ ಔರಾದ ಪಟ್ಟಣದಲ್ಲಿ ಶಾಂತಿ ಸೌಹಾರ್ದತೆಯ ಗಣೇಶ ಉತ್ಸವ ಜರುಗುತ್ತಿರುವುದು ವಿಶೇಷವಾಗಿದೆ.
ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ವೈದ್ಯಾಧಿಕಾರಿ ಡಾ. ಗಾಯತ್ರಿ ಅವರು “ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ” ಇವತ್ತು ಗಣೇಶ ಉತ್ಸವ ಅಂದ್ರೆ ನಾವು ನೋಡುತ್ತಿರುವ ಹಾಗೆ ಕೇವಲ ಪೂಜೆಗೆ ಸೀಮಿತವಾಗಿರಸದೆ ಸಮಾಜಮುಖಿ ಕಾರ್ಯ ಮಾಡುತ್ತಿರುವ ಯುವಕರು ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯದಲ್ಲಿ ತೊಡಗಿರುವುದು ತುಂಬಾ ಖುಷಿ ತಂದಿದೆ. ಇದೇ ರೀತಿ ಎಲ್ಲ ಗಣೇಶ ಮಂಡಳಿ ಅವರು ಸಮಾಜಮುಖಿ ಕೆಲಸದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಸಿಪಿಐ ರಘುವೀರಸಿಂಗ್ ಠಾಕೂರ್ ಯುವಕರು ರಕ್ತದಾನ ಮಾಡುವ ಮೂಲಕ ಗಣೇಶನಿಗೆ ತಮ್ಮ ನೈಜ ಭಕ್ತಿ ಸಮರ್ಪಣೆ ಮಾಡಿ ಜೀವ ಉಳಿಸುವ ಕಾರ್ಯ ಮಾಡುತ್ತಿದ್ದಾರೆ. ಅದರಲ್ಲಿ ವಿಶೇಷವಾಗಿ ಹಿಂದೂ ಮುಸ್ಲಿಂ ಯುವಕರು ಸೇರಿ ಭಾವೈಕ್ಯತೆಯಿಂದ ಜಾತಿ ಧರ್ಮ ಎನ್ನದೇ ಒಗ್ಗೂಡಿ ಸಮಾಜಕ್ಕೆ ಸೌಹರ್ದತೆ ಸಂದೇಶ ನೀಡಿದ್ದಾರೆ. ಮೋಜು ಮಸ್ತಿಗೆ ಆಸ್ಪದ ನೀಡದೆ ಇಂತಹ ವಿನೂತನ ಕಾರ್ಯಕ್ರಮ ಮಾಡಿದ್ದು ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಯುವ ಮುಖಂಡ ಸುಧಾಕರ ಕೊಳ್ಳುರ ಮಾತನಾಡಿದರು ಪಿಎಸ್‍ಐ ವಾಸಿಂ ಪಟೇಲ, ಪಟ್ಟಣ ಪಂಚಾಯಿತಿ ಸದಸ್ಯ ದಯಾನಂದ ಘೂಳೆ, ಶಿವಾಜಿ ಜಾಧವ, ಚಂದ್ರಕಾಂತ ದ್ಯಾಡೆ, ಮಹೇಶ ಪಸರ್ಗೆ, ಅಮರಸ್ವಾಮಿ ಸ್ಥಾವರಮಠ, ಸಂತೋಷ ಸ್ವಾಮಿ, ಶಂಕು ನಿಶ್ಪತೆ, ಸಂತೋಷ ದ್ಯಾಡೆ, ಪ್ರದೀಪ ಜಾಧವ, ಮೋಸಿನ್ ಪಟೇಲ್, ಚೇತನ ಮಜಗೆ, ಸಂತೋಷ ಮಜಗೆ, ಅಮರಲಿಂಗ ದ್ಯಾಡೆ, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ರಕ್ತದಾನ ಮಾಡಿದ ಮುಸ್ಲಿಂ-ಹಿಂದೂ ಬಾಂಧವರು
ಫೈಜುಲ್ಲಾಖಾನ, ಮೋಸಿನ್ ಪಟೇಲ್, ಆಕಾಶ ನಾಗೂರೆ, ಸಂತೋಷ ಸ್ವಾಮಿ, ಶಿವಬಸವ ಪಾಟೀಲ, ನಾಗರಾಜ ಭಾಲ್ಕೆ, ವಿಶಾಲ ಗಜರೆ, ಶ್ರೀಕಾಂತ ನಿರ್ಮಳೆ, ಬಸವಲಿಂಗ ಯನಗುಂದೆ, ಸೇರಿದಂತೆ ಸುಮಾರು 50 ಜನ ಯುವಕರು ರಕ್ತದಾನ ತಮ್ಮ ಭಕ್ತಿ ಸಮರ್ಪಣೆ ಗಣೇಶನಿಗೆ ಅರ್ಪಿಸಿದರು.
ಪ್ರತಿ ವರ್ಷ ನಡೆಯುವ ಗಣೇಶೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಹಾಗೂ ವಿನೂತನ ಕಾರ್ಯಕ್ರಮಕ್ಕೆ ನಮ್ಮ ಓಣಿಯ ನಿವಾಸಿಗಳು ಸಾಕ್ಷಿಯಾಗಿದ್ದಾರೆ, ಧರ್ಮ-ಜಾತಿ ಎನ್ನದೇ ಎಲ್ಲರೂ ಒಗ್ಗೂಡಿ ಇದೆ ರೀತಿಯಲ್ಲಿ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿದರೆ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಯುರುತ್ತದೆ.
ಸಂತೋಷ ದ್ಯಾಡೆ
ಗಣೇಶ ಮಂಡಳಿ ಮುಖಂಡರು.
ರಕ್ತವನ್ನು ದಾನ ಮಾಡಿದರೆ ಪರೋಕ್ಷವಾಗಿ ಹಲವಾರು ಜೀವ ಉಳಿಸಿದಂತಾಗುತ್ತದೆ. ಆರೋಗ್ಯವಂತರು ಎಲ್ಲರೂ ರಕ್ತದಾನ ಮಾಡಲು ಅರ್ಹರಾಗಿದ್ದು, ರಕ್ತದಾನದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಗಣೇಶ ಉತ್ಸವದಲ್ಲಿ ಈ ರೀತಿಯ ಸಮಾಜಮುಖಿ ಕೆಲಸಕ್ಕೆ ಮುಂದಾಗಿರುವ ಹಾಗೂ ಸೌಹಾರ್ದತೆಯ ಸಂದೇಶ ಸಾರಿದ ಯುವಕರ ಕಾರ್ಯ ಶ್ಲಾಘನೀಯದದ್ದು.
ರಘುವೀರಸಿಂಗ್ ಠಾಕೂರ
ಸಿಪಿಐ ಔರಾದ್