ಮುನಿರತ್ನ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಿ: ಎಂ.ಲಕ್ಷ್ಮಣ್ ಆಗ್ರಹ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.15:- ಗುತ್ತಿಗೆದಾರ ಬಳಿ ಲಂಚಕ್ಕೆ ಬೇಡಿಕೆ ಇಟ್ಟು ಒಕ್ಕಲಿಗ, ದಲಿತ ಸಮುದಾಯದ ಬಗ್ಗೆ ಅವಾಚ್ಯವಾಗಿ ನಿಂದಿಸಿರುವ ಬೆಂಗಳೂರಿನ ಆರ್.ಆರ್.ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಬೇಕು, ಈತನನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಕೂಡಲೇ ಬಂಧಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಘನತ್ಯಾಜ್ಯ ನಿರ್ವಹಣೆಗೆ ಗಂಗಾ ಎಂಟರ್ ಪ್ರೈಸಸ್ ಗೆ ಗುತ್ತಿಗೆ ನೀಡಲಾಗಿತ್ತು. ಮೂವತ್ತು ಲಕ್ಷದ ಟೆಂಡರ್ ಗೆ 15ಲಕ್ಷ ಕಮಿಷನ್ ಕೇಳಿದ್ದಾರೆ. ಈ ವೇಳೆ ಆ ವ್ಯಕ್ತಿಗೆ ಶಾಸಕ ಮುನಿರತ್ನ ಕೆಟ್ಟ ಪದಗಳನ್ನ ಬಳಸಿ ಬೈದಿದ್ದಾರೆ. ಈಗಾಗಲೇ ಆ ಆಡಿಯೋ ಎಲ್ಲಾ ಕಡೆ ವೈರಲ್ ಆಗಿದೆ ಎಂದು ಕಿಡಿಕಾರಿದರು. ಹಾಗೆಯೇ ಇದೇ ವೇಳೆ ಮುನಿರತ್ನ ಟೆಂಡರ್ ದಾರನಿಗೆ ಬೈದಿರುವ ಆಡಿಯೋ ಪ್ಲೇ ಮಾಡಿದರು.
ಶಾಸಕ ಮುನಿರತ್ನ ಸೇರಿದಂತೆ ಬಿಜೆಪಿಯಲ್ಲಿರುವ ಬಹುತೇಕರ ಮನಸ್ಥಿತಿ ಇದೇ ರೀತಿ ಇದೆ. ಶಾಸಕ ಮುನಿರತ್ನ ಗುತ್ತಿಗೆದಾರ ಚಲುವರಾಜ್ ಅವರನ್ನು ತನ್ನ ಮನೆಗೆ ಕರೆಸಿಕೊಂಡು ನೀನು ಗೌಡನ, ನೀನ್ಯಾಕೆ ಹೊಲೆಯನ ಬಳಿ ಹೋಗುತ್ತೀಯ ನಿನ್ನ ಹೆಂಡತಿಯನ್ನು ನನ್ನ ಬಳಿಗೆ ಕಳುಹಿಸು ಎಂದು ಒಕ್ಕಲಿಗ ಮತ್ತು ದಲಿತ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ. ಒಕ್ಕಲಿಗ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆದಿದ್ದಾನೆ. ಸೋ ಕಾಲ್ಡ್ ಬಿಜೆಪಿ-ಜೆಡಿಎಸ್ ನ ಒಕ್ಕಲಿಗ ನಾಯಕರು ಯಾಕೆ ಮಾತನಾಡುತ್ತಿಲ್ಲ, ಎಚ್.ಡಿ.ಕುಮಾರಸ್ವಾಮಿಯವರೇ ಈ ವಿಚಾರದ ಬಗ್ಗೆ ಯಾಕೆ ನೀವು ಮಾತನಾಡುತ್ತಿಲ್ಲ? ಬಿಜೆಪಿಯವರು ಮಂತ್ರಿ ಸ್ಥಾನ ಕೊಟ್ಟಿದ್ದಾರೆ ಎಂದು ಸುಮ್ಮನಾಗಿದ್ದೀರ ಎಂದು ಪ್ರಶ್ನಿಸಿದರು.
ಈ ರೀತಿಯಾದ ಪದ ಬಳಕೆ ಮಾಡಿರುವ ಮುನಿರತ್ನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಮುನಿರತ್ನ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು ಮಾಡಬೇಕು. ಮುಂದಿನ ದಿನಗಳಲ್ಲಿ ಅಹಿತಕರ ಘಟನೆ ನಡೆದರೆ ಪೆÇಲೀಸ್ ನವರೇ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು.
ಶಾಸಕ ಮುನಿರತ್ನ ನನ್ನ ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಬಿಜೆಪಿ ಸದಸ್ಯತ್ವ ವಾಪಸ್ ಪಡೆಯಬೇಕು. ಶಾಸಕ ಮುನಿರತ್ನ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡುತ್ತೇವೆ. ಈತನ ಶಾಸಕ ಸ್ಥಾನ ವಜಾಗೊಳಿಸುವಂತೆ ಸ್ಪೀಕರ್ ಅವರಿಗೂ ದೂರು ಕೊಡುತ್ತೇವೆ. ಈತನ ವಿರುದ್ಧ ಕ್ರಮ ಕೈಗೊಳ್ಳಲು ಗೃಹ ಸಚಿವರನ್ನ ಕೂಡ ಆಗ್ರಹ ಮಾಡುತ್ತೇವೆ ಎಂದು ಹೇಳಿದರು.
ಶಾಸಕ ಮುನಿರತ್ನನನ್ನು ಬಂಧಿಸುವಂತೆ ಆಗ್ರಹಿಸಿ ಪಕ್ಷಾತೀತವಾಗಿ ಸೆ.16 ರ ಸೋಮವಾರ ಬೆಳಿಗ್ಗೆ 11.30 ಗಂಟೆಗೆ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ಮಾಡುತ್ತೇವೆ. ಸ್ವಾಭಿಮಾನಿ ಒಕ್ಕಲಿಗರು, ದಲಿತರು ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಶಿವಣ್ಣ, ಈಶ್ವರ್ ಚಕ್ಕಡಿ, ಗಿರೀಶ್, ಮಾಧ್ಯಮ ವಕ್ತಾರ ಮಹೇಶ್ ಉಪಸ್ಥಿತರಿದ್ದರು.