ಪಂಚಮಸಾಲಿ 2ಎ ಮೀಸಲಿಗೆ ಆಗ್ರಹಿಸಿ ಸೆ.22ಕ್ಕೆ ಬೆಳಗಾವಿಯಲ್ಲಿ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.15:- ಪಂಚಮಸಾಲಿ 2ಎ ಮೀಸಲಾತಿಗಾಗಿ ಆಗ್ರಹಿಸಿ ಬೆಳಗಾವಿಯಲ್ಲಿ ಸೆ.22 ರಂದು ವಕೀಲರ ಪ್ರಥಮ ರಾಜ್ಯ ಸಮಾವೇಶ ಆಯೋಜಿಸಲಾದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ನಗರದ ಹೊಸಮಠದಲ್ಲಿ ಶನಿವಾರ ವಕೀಲರ ಪೂರ್ವಭಾವಿ ಸಭೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಸಮಾವೇಶ ನಡೆಯಲಿದೆ.ಜತೆಗೆ ಮಧ್ಯಾಹ್ನ 1 ಗಂಟೆಗೆ ಧರಣಿ ಮಾಡುತ್ತೇವೆ. ಅಂದು ಮಂಡ್ಯ, ಹಾಸನ, ಚಾಮರಾಜನಗರ, ಮೈಸೂರು ಭಾಗದ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಸಮುದಾಯದ ಮಕ್ಕಳಿಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು.
ವಕೀಲರ ಮೂಲಕ ಪಂಚಮಸಾಲಿ ಮೀಸಲಾತಿ ಎರಡನೇ ಹಂತದ ಹೋರಾಟ ಪ್ರಾರಂಭಿಸಲಾಗಿದೆ. ಅದರ ಭಾಗವಾಗಿ ಮೈಸೂರಿನಲ್ಲಿ ವಕೀಲರ ಪೂರ್ವಭಾವಿ ಸಭೆ ನಡೆಸಿ ಚರ್ಚಿಸಲಾಗುತ್ತಿದೆ. ನಮ್ಮ ಸಮಾಜದ ಜನರ ನ್ಯಾಯಯುತ ಹಕ್ಕಾಗಿರುವ 2ಎ ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ವಕೀಲರ ಸಂಘಟನೆ ಕೂಡಾ ಮಾಡಲಾಗಿದೆ. ಈಗ ರಾಜ್ಯವ್ಯಾಪಿ ಸಮಾಜದ ವಕೀಲರ ಸಂಘಟನೆ ಮಾಡಲಾಗಿದೆ. ಈಗಾಗಲೇ ನಾವೆಲ್ಲರೂ ಹೋರಾಟ ಮಾಡಿದರು ಸದನದಲ್ಲಿ ಶಾಸಕರು ಮಾತನಾಡಲಿಲ್ಲ. ಅದಕ್ಕಾಗಿ ವಕೀಲರ ಸಂಘಟನೆ ಮಾಡಿ ಆ ಮೂಲಕ ಒತ್ತಡ ತರಲು ರೂಪರೇಷೆಗಳನ್ನು ಸಿದ್ಧಪಡಿಸಲಾಗಿದೆ ಎಂದರು.
ಸೆ.17 ರಂದು ಗುಲ್ಬರ್ಗಾ ಭಾಗದ ಸಮುದಾಯ ಮುಖಂಡರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ. ಯಾರೇ ಸಿಎಂ ಆಗಲಿ, ಯಾವುದೇ ಸರ್ಕಾರ ಬರಲಿ ಮೀಸಲಾತಿ ನೀಡುವವರೆಗೂ ನಮ್ಮ ಹೋರಾಟ ನಿರಂತರ ಎಂದರು.
ಈಗಲೂ ಸರ್ಕಾರ ನಮ್ಮನ್ನು ಕರೆದು ಮೀಸಲಾತಿ ಸಂಬಂಧ ಚರ್ಚೆ ನಡೆಸದೆ ಇದ್ದರೆ ಮುಂದೆ ಉಗ್ರ ಹೋರಾಟ ಮಾಡುತ್ತೇವೆ. ಡಿಸೆಂಬರ್‍ನಲ್ಲಿ ನಡೆಯುವ ಅಧಿವೇಶನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದು ಹೋರಾಟ ಮಾಡುತ್ತೇವೆ. ಸರ್ಕಾರ ನಮ್ಮ ಜತೆ ಮಾತನಾಡುವ ಸೌಜನ್ಯ ತೋರಿಸಬೇಕು ಎಂದು ಅವರು ತಿಳಿಸಿದರು.
ರಾಜಕೀಯವಾಗಿಯೂ ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ. ರಾಜಕೀಯ ಅನ್ಯಾಯವನ್ನು ನಾವು ಸಹಿಸುತ್ತೇವೆ. ನಾವು ಬೆಳೆದ ಬೆಳೆ ನಷ್ಟವಾದರೂ ಸಹಿಸುತ್ತೇವೆ. ಆದರೆ,ನಮ್ಮ ಸಮಾಜದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೇಳುತ್ತಿರುವ ಮೀಸಲಾತಿ ಕೊಡದಿದ್ದರೆ ನಾವು ಎಂದೂ ಸಹಿಸಲ್ಲ. ನಮ್ಮ ಸಮುದಾಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೀಸಲಾತಿ ಬೇಕು. ಈ ಸಂಬಂಧ ನಾವು ಮೂರುವರೆ ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಇಬ್ಬರು ಮುಖ್ಯಮಂತ್ರಿಗಳು, ಸರ್ಕಾರ ಬದಲಾಗಿದೆ. ಆದರೂ ನಮ್ಮ ಹೋರಾಟಕ್ಕೆ ಸರ್ಕಾರದಿಂದ ಬೆಲೆ ಸಿಕ್ಕಿಲ್ಲ ಎಂದು ದೂರಿದರು.
ಬೆಳಗಾವಿಯಲ್ಲಿ ವಕೀಲರ ಸಮಾವೇಶದ ಮೂಲಕ ಬೃಹತ್ ಹೋರಾಟ ರೂಪಿಸಲಾಗುವುದು, ಕಾನೂನಾತ್ಮಕವಾಗಿ ಯಾವ ರೀತಿಯ ಹೋರಾಟ ಮಾಡಬೇಕು ಎನ್ನುವ ಬಗ್ಗೆ ಚರ್ಚಿಸಲು 10 ಜನ ಹಿರಿಯ ವಕೀಲರ ಸಮಿತಿ ರಚನೆ ಮಾಡಿ ಆ ಮೇಲೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮುಂದಿನ ಹೋರಾಟದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ಅಧಿವೇಶನದಲ್ಲಿ ಪಂಚಮಸಾಲಿ 2 ಎ ಮೀಸಲಾತಿ ಬಗ್ಗೆ ಮಾತನಾಡುವಂತೆ ನಮ್ಮ ಸಮುದಾಯದ ಎಲ್ಲ ಶಾಸಕರಿಗೆ ತಿಳಿಸಿದ್ದೆ. ಆದರೆ, ಯಾರೂ ಈ ಸಂಬಂಧ ಮಾತನಾಡಿಲ್ಲ. ಕೇಳಿದರೆ ವಿಧಾನಸಭಾ ಅಧ್ಯಕ್ಷರು ಅವಕಾಶ ನೀಡಿಲ್ಲ ಎಂದು ಹೇಳುತ್ತಾರೆ.
ಹಿಂದಿನ ಸರ್ಕಾರ ನಮ್ಮ ಹೋರಾಟಕ್ಕೆ ಭಯ ಪಡುತ್ತಿತ್ತು. ಈಗ ಶಾಸಕರು ಮಾತನಾಡುತ್ತಿಲ್ಲ. ಹಿಂದಿನ ಸರ್ಕಾರದಲ್ಲಿ ಬಿಜೆಪಿಯ ಶಾಸಕರುಗಳು ಸದನದಲ್ಲಿ ಮಾತನಾಡುತ್ತಿದ್ದರು. ನಮ್ಮ ಸಮಾಜದ ಶಾಸಕರುಗಳು ಸಭಾತ್ಯಾಗ ಮಾಡಬೇಕಿತ್ತು. ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಬೇಕಿತ್ತು ಎಂದು ಅವರು ಆಗ್ರಹಿಸಿದರು.