ಅವೈಜ್ಞಾನಿಕ ಅಭಿವೃದ್ಧಿಯಿಂದ ಅಪಾಯವಾಗದಂತ ಕ್ರಮ ವಹಿಸೋಣ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.15:- ಪ್ರಕೃತಿಯ ಮೂಲ ರಚನೆಗೆ ಧಕ್ಕೆಯಾಗದ ರೀತಿಯಲ್ಲಿ ಸುಸ್ಥಿರ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು ಎಂದು ಕರ್ನಾಟಕ ಸರ್ಕಾರದ ವಿಶ್ರಾಂತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗುರುಚರಣ್ ಗೊಲ್ಲರಕೇರಿ ಸಲಹೆ ನೀಡಿದರು.
ಮೈಸೂರು ವಿಶ್ವವಿದ್ಯಾನಿಲಯ, ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ, ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯ ಮೈಸೂರು ಶಾಖೆ ಹಾಗೂ ಮೈಸೂರು ಮುಕ್ತ ವೇದಿಕೆ ಸಹಯೋಗದೊಂದಿಗೆ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ವಿಶ್ವಜ್ಞಾನಿ ಸಭಾಂಗಣದಲ್ಲಿ ನಡೆದ `ಹವಾಮಾನ ಬದಲಾವಣೆ: ಜಿಲ್ಲಾ ಮಟ್ಟದಲ್ಲಿ ಮುಖ್ಯವಾಹಿನಿ ಹವಮಾನ ಕ್ರಮ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಅವೈಜ್ಞಾನಿಕ ಅಭಿವೃದ್ಧಿಯ ಕ್ರಮಗಳಿಂದ ಪ್ರಾಕೃತಿಕ ಅಪಾಯಗಳು ಎದುರಾದಾಗ ಗಡಿಬಿಡಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಓಡಾಡುವ ಬದಲು, ಪ್ರಾಕೃತಿಕ ಅಪಾಯಗಳು ಎದುರಾಗದ ಹಾಗೆ ಸರ್ಕಾರಗಳು ಕ್ರಮವಹಿಸಬೇಕು ಎಂದರು.
ಪ್ರಾಕೃತಿಕ ವಿಪ್ಪತ್ತುಗಳನ್ನು ಎದುರಿಸಲು ಸರ್ಕಾರ ಎಷ್ಟು ಜವಾಬ್ದಾರಿಯಾಗಿದೆಯೋ, ಸಾರ್ವಜನಿಕರೂ ಅಷ್ಟೇ ಜವಾಬ್ದಾರಿಯನ್ನು ಹೊಂದಿದ್ದಾರೆ. ನೆರಹಾವಳಿ, ಬರ ಮತ್ತು ಗುಡ್ಡಕುಸಿತದಂತಹ ಪ್ರಾಕೃತಿಕ ವಿಪ್ಪತ್ತುಗಳು ಸಂಭವಿಸಿದಾಗ ಸರ್ಕಾರೇತರ ಸಂಸ್ಥೆಗಳು, ವಿವಿಧ ಸೇವಾ ಸಂಸ್ಥೆಗಳು ಸಂತ್ರಸ್ತರ ನೆರವಿಗೆ ಧಾವಿಸಬೇಕು. ಪ್ರಾಕೃತಿಕ ವಿಪತ್ತು ಎದುರಾದಂತಹ ಸಂದರ್ಭದಲ್ಲಿ ಜನರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಅಗತ್ಯವಾದ ರಕ್ಷಣಾ ಕ್ರಮಗಳ ಬಗ್ಗೆ ಜನರಿಗೆ ತರಬೇತಿ ಶಿಬಿರ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಸರ್ಕಾರ ಗ್ರಾಮೀಣ ಮಟ್ಟದಲ್ಲಿ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಶ್ವವಿದ್ಯಾನಿಲಯದ ಗೌರವ ಪ್ರಾಧ್ಯಾಪಕ ಪೆÇ್ರ.ಎನ್.ಶಿವಣ್ಣ ಪಂಚಾಯತ್ ರಾಜ್: ತತ್ವಗಳು ಮತ್ತು ಆಚರಣೆಗಳು ಕುರಿತು ಮಾತನಾಡಿ, ಪಂಚಾಯತ್ ರಾಜ್ ಇಲಾಖೆಯು ಸರ್ಕಾರದಂತೆ ತಾನೇ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಅಧಿಕಾರವನ್ನು ಹೊಂದಿದೆ. ಇಂತಹ ಸ್ವಾತಂತ್ರ?ಯವನ್ನು ಪಡೆದಿರುವ ಇಲಾಖೆಯು ಅಭಿವೃದ್ಧಿಯಿಂದ ಬಂದ ಲಾಭವನ್ನು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ಸಂಪತ್ತಿನ ಸಮಾನ ಹಂಚಿಕೆ ಮಾಡಬೇಕು ಎಂದು ತಿಳಿಸಿದರು.
ಪಂಚಾಯತ್ ರಾಜ್ ವ್ಯವಸ್ಥೆಯ ತತ್ವಗಳು ಪ್ರಾಯೋಗಿಕವಾಗಿ ಸಾಕಾರಗೊಳ್ಳಬೇಕಾದರೆ ಜನರ ಸಹಭಾಗಿತ್ವ ಬಹಳ ಮುಖ್ಯ. ಗ್ರಾಮ ಸಭೆಗಳು ಸಾರ್ವಜನಿಕ ಸಹಭಾಗಿತ್ವಕ್ಕೆ ದೊರೆತ ಅಮೂಲ್ಯ ಅವಕಾಶಗಳಾಗಿರುತ್ತವೆ. ಆದರೆ ಜನರ ಸಹಭಾಗಿತ್ವವನ್ನು ತಪ್ಪಿಸುವ ದುರುದ್ದೇಶದಿಂದಲೇ ಗ್ರಾಮ ಸಭೆಗಳನ್ನು ಮುಂದೂಡಲಾಗುತ್ತದೆ. ಮಹಿಳೆಯರ ಮತ್ತು ಮಕ್ಕಳ ಗ್ರಾಮಸಭೆಗಳು ಅಭಿವೃದ್ಧಿಯ ದೃಷ್ಠಿಯಿಂದ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಆದರೆ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಗ್ರಾಮಸಭೆಗಳನ್ನು ನಡೆಸುವುದೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ವಿಶ್ರಾಂತ ಡಿಜಿ ಮತ್ತು ಐಜಿ ಡಾ.ಎಸ್.ಟಿ. ರಮೇಶ್, ಮೈಸೂರು ಮುಕ್ತ ವೇದಿಕೆಯ ಸಂಚಾಲಕ ರವಿಜೋಶಿ, ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಡಾ.ಜೆ. ಸೋಮಶೇಖರ್ ಉಪಸ್ಥಿತರಿದ್ದರು.