ಮಾನವ ಸರಪಳಿ ಆಯೋಜನೆ:ಸಂಚಾರ ಸುರಕ್ಷೆಗೆ ಹೆಚ್ಚಿನ ಗಮನ ಕೊಡಿ:ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ:ಸೆ.14: ಅಂತರಾಷ್ಟ್ರಿಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ರವಿವಾರ ಕಲಬುರಗಿ ಜಿಲ್ಲೆಯಾದ್ಯಂತ ನಡೆಯುವ ಮಾನವ ಸರಪಳಿ ರಚನೆ ಸಂದರ್ಭದಲ್ಲಿ ಸಂಚಾರ ಸುರಕ್ಷತೆ ದೃಷ್ಠಿಯಿಂದ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ. ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶನಿವಾರ ಬೆಂಗಳೂರಿನಿಂದ ವಿಡಿಯೋ ಕಾನ್ಪೆರೆನ್ಸ್ ಮೂಲಕ ಕಲಬುರಗಿ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಮಹತ್ವ ಸಾರುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು, ಜಿಲ್ಲೆಯ ಜನತೆ ಸಕ್ರೀಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಬೀದರನಿಂದ ಚಾಮರಾಜನಗರ ವರೆಗೆ ಏಕಕಾಲದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಏಕಕಾಲದಲ್ಲಿ 113 ಕಿ.ಮೀ. ಉದ್ದ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ. ಮಾನವ ಸರಪಳಿ ರಚನೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳಾ ಸ್ವ-ಸಂಘದ ಸದಸ್ಯರು, ಸಾರ್ವಜನಿಕರು ಭಾಗವಹಿಸುವುದರಿಂದ ಕುಡಿಯುವ ನೀರಿನ ವ್ಯವಸ್ಥೆ, ವಾಹನದ ವ್ಯವಸ್ಥೆ ಕಲ್ಪಿಸಬೇಕು. ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕೆಂದರು.
ಜಿಲ್ಲೆಯ ಕಮಲಾಪೂರ ತಾಲೂಕಿನ ಕಿಣ್ಣಿಸಡಕ್‍ನಿಂದ ಕಮಲಾಪೂರ-ಕಲಬುರಗಿ-ಶಹಾಬಾದ-ವಾಡಿ-ನಾಲವಾರ ಮಾರ್ಗವಾಗಿ ಅಲ್ಲಿಪೂರ ತಾಂಡಾ ವರೆಗೆ ಮಾನವ ಸರಪಳಿ ನಿರ್ಮಿಸಲಾಗುತ್ತಿದ್ದು, ಆಯಾ ತಾಲೂಕಿನ ತಹಶೀಲ್ದಾರರು, ತಾಲೂಕಾ ಪಂಚಾಯತ್ ಇ.ಓ., ಪಿ.ಡಿ.ಓ ಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಕಾರ್ಯಕ್ರಮ ಯಶಸ್ಸಿಗೆ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದರು.
ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೆÇಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವಾರ್ ಸಿಂಗ್ ಮೀನಾ, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ ಶಂಕರ, ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಡಿ.ಸಿ.ಎಫ್. ಸುಮಿತ್ ಪಾಟೀಲ, ಕೆ.ಕೆ.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಜೆಸ್ಕಾಂ ಎಂ.ಡಿ. ರವೀಂದ್ರ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.