ನ್ಯಾಶನಲ್ ಲೋಕ ಅದಾಲತ್ 109696 ಪ್ರಕರಣಗಳು ಇತ್ಯರ್ಥ
ಕಲಬುರಗಿ:ಸೆ.14: ಗೌರವಾನ್ವಿತ ಉಚ್ಛ ನ್ಯಾಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಡಿಯಲ್ಲಿ ಸೆಪ್ಟೆಂಬರ್ 14 ರಂದು ನಡೆದ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ನ್ಯಾಶನಲ್ ಲೋಕ್ ಅದಾಲತ್ ವತಿಯಿಂದ ಆಯೋಜಿಸಲಾಗಿತ್ತು.
ಕಲಬುರಗಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ನ್ಯಾಶನಲ್ ಲೋಕ್ ಅದಾಲತ್‍ದಲ್ಲಿ ಕಕ್ಷಿದಾರರು, ನ್ಯಾಯಾಧೀಶರು, ಸಂಧಾನಕಾರರು ಹಾಗೂ ಸಂಬಂಧಪಟ್ಟ ನ್ಯಾಯವಾದಿಗಳು ರಾಜಿ ಸಂಧಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ,ಅಧ್ಯಕ್ಷೆ ಎಸ್. ನಾಗಶ್ರೀ, ಜಿಲ್ಲಾ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲಾ ಗೌರವಾನ್ವಿತ ನ್ಯಾಯಾಧೀಶರು, ನ್ಯಾಯವಾದಿಗಳು ಹಾಗೂ ಕಕ್ಷಿದಾರರ ಸಹಕಾರದಿಂದ ನ್ಯಾಶನಲ್ ಲೋಕ್ ಅದಾಲತ್ ಮೂಲಕ ಸಿವಿಲ್ ದಾವೆಗಳು, ಮೋಟಾರು ವಾಹನ, ಅಪಘಾತ ಪರಿಹಾರ ಪ್ರಕರಣಗಳು, ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು, ಭೂಸ್ವಾಧೀನ ಪರಿಹಾರ ವಸೂಲಾತಿ ಪ್ರಕರಣಗಳು, ಬ್ಯಾಂಕ್‍ಗಳಿಗೆ ಸಂಬಂಧಿಸಿದ ವ್ಯಾಜ್ಯಪೂರ್ವ ಪ್ರಕರಣಗಳು ಮತ್ತು ನೀರಿನ ಬಾಕಿ ಪ್ರಕರಣಗಳು ಸೇರಿದಂತೆ ಒಟ್ಟು 109696 ಪ್ರಕರಣಗಳು ಇತ್ಯರ್ಥಗೊಂಡಿರುತ್ತದೆ.
ರೂ:671002088/- ಗಳ ಪರಿಹಾರ ಮೊತ್ತ ಇತ್ಯರ್ಥಗೊಂಡಿರುತ್ತದೆ ಹಾಗೂ ಕುಟುಂಬ ನ್ಯಾಯಾಲಯದ 03 ಪ್ರಕರಣಗಳಲ್ಲಿ ಬೇರ್ಪಡೆಯಾಗಿದ್ದ ಪತಿ ಮತ್ತು ಪತ್ನಿಯರನ್ನು ಒಂದುಗೂಡಿಸಲಾಯಿತು ಹಾಗೂ 10 ವರ್ಷಗಳಿಗಿಂತ ಹೆಚ್ಚಿನ ಅವಧಿಯ 01 ಪ್ರಕರಣ ಹಾಗೂ 07 ವರ್ಷಗಳಿಗಿಂತ ಹೆಚ್ಚಿನ ಅವಧಿಯ 06 ಪ್ರಕರಣಗಳನ್ನು ರಾಜಿ ಮಾಡಿಸಿದ್ದು ಇರುತ್ತದೆ.
ಕಲಬುರಗಿ ಜಿಲ್ಲೆಯಲ್ಲಿ ಮೆಗಾ ಲೋಕ್ ಅದಾಲತ್ ಅದ್ಭುತ ಯಶಸ್ಸನ್ನು ಕಂಡಿರುತ್ತದೆ ಎಂದು ಗೌರವಾನ್ವಿತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಸ್. ನಾಗಶ್ರೀ, ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ ನವಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
