ಬಾಲಕಿ ಅತ್ಯಾಚಾರಿಗೆ 30 ವರ್ಷ ಜೈಲುಶಿಕ್ಷೆ
ಕಲಬುರಗಿ.ಸೆ.14: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಪರಾಧ ಸಾಬೀತಾದ್ದರಿಂದ ಅಪರಾಧಿಗೆ 30 ವರ್ಷ ಜೈಲುಶಿಉಕ್ಷೆ ವಿಧಿಸಿ ಜಿಲ್ಲಾ ಮತ್ತು ಸೆಷನ್ಸ್ ( ವಿಶೇಷ ಪೋಕ್ಸೊ) ನ್ಯಾಯಾಲಯ ಆದೇಶಿಸಿದೆ.
ಕಮಲಾಪುರ ತಾಲೂಕಿನ ಗ್ರಾಮವೊಂದರ ನಿವಾಸಿ ಶಾಮರಾವ ಅಲಿಯಾಸ್ ಶಾಮಣ್ಣ ಜಗನ್ನಾಥ ಚಿಕ್ಕನಾಗಾಂವ ಶಿಕ್ಷೆಗೆ ಒಳಗಾದ ವ್ಯಕ್ತಿ.
ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಶಾಮರಾವನಿಗೆ 30 ವರ್ಷ ಜೈಲುಶಿಕ್ಷೆ ಮತ್ತು 20 ಸಾವಿರ ರೂ ದಂಡ ವಿಧಿಸಿ ಜಿಲ್ಲಾ ಮತ್ತು ಸೆಷನ್ಸ್ ( ವಿಶೇಷ ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ಆದೇಶಿಸಿದ್ದಾರೆ.
ಅಳಂದ ತಾಲೂಕಿನ ನರೋಣಾ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಅಪರಾಧಿಯು ಬಾಲಕಿಗೆ ಮದುವೆ ಆಗುವದಾಗಿ ಹೇಳಿ 2023 ರ ಜ.5 ರಂದು ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದನು. ಯಾರಿಗಾದರೂ ಹೇಳಿದರೆ ಜೀವ ತೆಗೆಯುತ್ತೇನೆ ಎಂದು ಹೆದರಿಸಿದ್ದನು.2023 ರ ಫೆ 15 ರಂದು ಬಾಲಕಿಯನ್ನು ಅಪಹರಣ ಮಾಡಿ ಬೇರೆ,ಬೇರೆ ಸ್ಥಳಗಳಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ನರೋಣಾ ಠಾಣೆಯಲ್ಲಿ ದೂರು ದಾಖಲಾಗಿತ್ತು.ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ಅವರು ವಾದ ಮಂಡಿಸಿದ್ದರು.