ಬದುಕಿನಲ್ಲಿ ಗಟ್ಟಿಗರಾಗಲು ನೋವು, ಸಂಕಟ, ಯಾತನೆಗಳು ಎದುರಿಸಬೇಕು: ಡಾ. ಖಾಜಾವಲಿ ಈಚನಾಳ
ಜೇವರ್ಗಿ,ಸೆ.14- ಸಮಾಜದಲ್ಲಿ ನೋವು, ಸಂಕಟ, ಯಾತನೆ, ನಿಂದನೆ, ಅವಮಾನ ಯಾರು ಅನುಭವಿಸುತ್ತಾರೋ ಅವರು ಬದುಕಿನಲ್ಲಿ ಗಟ್ಟಿಗರಾಗುತ್ತಾರೆ. ಆದರೆ ಇವೆಲ್ಲವನ್ನು ಎದುರಿಸಲು ಧೈರ್ಯ, ತಾಳ್ಮೆಯನ್ನು ಹೊಂದಬೇಕು. ಬುದ್ಧ, ಬಸವ, ಅಂಬೇಡ್ಕರ್, ಯೇಸು, ಪೈಗಂಬರರ ಕುರಿತು ಅಧ್ಯಯನ ಮಾಡಿ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಶಿಕ್ಷಣವೇ ಸಂಜೀವಿನಿಯಾಗಿದೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡಿ ಭವಿಷ್ಯದಲ್ಲಿ ಸುಂದರ ಬದುಕನ್ನು ರೂಪಿಸಿಕೊಳ್ಳಬೇಕೆಂದು ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಖಾಜಾವಲಿ ಈಚನಾಳ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ನೇತಾಜಿ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿತ ಶ್ರೀ ಸಾಯಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ, ಶಿಕ್ಷಕರ ದಿನಾಚರಣೆ, ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮದಲ್ಲಿ ಅವರು, ಸಸಿಗೆ ನೀರುಣಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೂಡಲ ಸಂಗಮ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಬಸವರಾಜ ಬಿರಾದಾರ, ಶ್ರೀ ಹರಿ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ರಮೇಶ ಗುತ್ತೇದಾರ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಿವೃತ್ತ ನಿರ್ವಾಹಕ ಮಾನಯ್ಯ ಗುತ್ತೇದಾರ ಮತ್ತು ನಿವೃತ್ತ ಚಾಲಕ ಈರಣ್ಣ ಇಜೇರಿ ಇವರಿಗೆ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಸಾಯಿ ಸ್ವತಂತ್ರ ಪಪೂ ಕಾಲೇಜಿನ ಕಾರ್ಯದರ್ಶಿ ಶಿವರಾಜ ಬಿ ಗುತ್ತೇದಾರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಅಮೀನಪ್ಪ ಹೊಸಮನಿ ಮಾತನಾಡಿ, ಶಿಕ್ಷಕರ ದಿನಾಚರಣೆ ಸಾರ್ಥಕವಾಗಬೇಕಾದರೆ, ವಿದ್ಯಾರ್ಥಿಗಳು ಚೆನ್ನಾಗಿ ಓದಿ ಒಳ್ಳೆಯ ಜೀವನ ರೂಪಿಸಿಕೊಳ್ಳಲು ಕರೆ ನೀಡಿದರು.
ಮಾಶುಂಅಲಿ ಯಲಗೋಡ ಪ್ರಾಸ್ತಾವಿಕ ನುಡಿದರು, ಭೀಮಯ್ಯ ಗುತ್ತೇದಾರ ಸ್ವಾಗತ ಕೋರಿದರು. ನಾಗಣ್ಣ ಜ?ನಾಪೂರ ನಿರೂಪಿಸಿದರೆ, ಲಾಳೇ ಪಟೇಲ್ ಯಾಳವಾರ್ ವಂದಿಸಿದರು.