ಅರೆಬೆತ್ತಲಾಗಿ ತಲ್ವಾರ್ ಹಿಡಿದು ಓಡಾಟ: ಯುವಕನ ವಿರುದ್ಧ ಪ್ರಕರಣ ದಾಖಲು
ಕಲಬುರಗಿ,ಸೆ.14-ಜಿಲ್ಲೆಯ ಸೇಡಂ ತಾಲ್ಲೂಕಿನ ತೋಟ್ನಳ್ಳಿ ಗ್ರಾಮದಲ್ಲಿ ಪಾನಮತ್ತನಾಗಿ ಕೈಯಲ್ಲಿ ತಲ್ವಾರ್ ಹಿಡಿದು ಓಡಾಟ ನಡೆಸಿದ ಯುವಕನ ವಿರುದ್ಧ ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮದ ಮಲ್ಲಪ್ಪ ಗುಂಡಪ್ಪ ಪೂಜಾರಿ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಲ್ಲಪ್ಪ ಪಾನಮತ್ತನಾಗಿ ಅರೆಬೆತ್ತಲಾಗಿ ಕೈಯಲ್ಲಿ ತಲ್ವಾರ್ ಹಿಡಿದು ಗ್ರಾಮದಲ್ಲಿ ಓಡಾಟ ನಡೆಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಸಂಬಂಧ ಗ್ರಾಮದ ಕೆಲವರು ಆತನ ವಿರುದ್ಧ ಮಳಖೇಡ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಈ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.
ಹಿನ್ನೆಲೆ: ಸೇಡಂ ತಾಲ್ಲೂಕಿನ ತೋಟ್ನಳ್ಳಿ ಗ್ರಾಮದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಯುವಕರ ಮಧ್ಯೆ ಜಗಳವಾಗಿತ್ತು. ಈ ಸಂಬಂಧ ಮಳಖೇಡ ಪೊಲೀಸರು ಗ್ರಾಮಸ್ಥರೊಂದಿಗೆ ಶಾಂತಿ ಸಭೆ ನಡೆಸಿದ್ದರು. ಆದರೆ, ಶನಿವಾರ ಗ್ರಾಮದ ಮಲ್ಲಪ್ಪ ಪೂಜಾರಿ ಎಂಬ ಯುವಕ ಪಾನಮತ್ತನಾಗಿ ಗ್ರಾಮದ ಭೀರಪ್ಪ ದೇವರ ಗುಡಿಯಲ್ಲಿನ ತಲ್ವಾರ್ ಹಿಡಿದು ಅರೆಬೆತ್ತಲಾಗಿ ಓಡಾಟ ನಡೆಸಿದ್ದ. ಮಲ್ಲಪ್ಪ ಅರೆಬೆತ್ತಲಾಗಿ ತಲ್ವಾರ್ ಹಿಡಿದು ಓಡಾಟ ನಡೆಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಯುವಕನ ಈ ಅನುಚಿತ ವರ್ತನೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆದಿದೆ.