ಪುಟ್ಟರಾಜ ಗವಾಯಿಗಳು ಅಂಧರ ಬಾಳಿನ ಆಶಾಕಿರಣ
ಕಲಬುರಗಿ,ಸೆ.14-ಅಂಧ ಅನಾಥರ ಬಾಳಿನ ಆಶಾಕಿರಣ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ 14ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ನಗರದ ವಿಜಯನಗರ ಕಾಲೋನಿಯಲ್ಲಿ ಅನ್ನಪೂರ್ಣ ಸಂಗೀತ ಶಾಲೆ ಆವರಣದಲ್ಲಿ ಆಚರಿಸಲಾಯಿತು.
ಪುಟ್ಟರಾಜ ಗವಾಯಿಗಳ ಭಾವ ಚಿತ್ರಕ್ಕೆ ಪುಷ್ಪಾರ್ಪಣೆಗೈದು ಮಾತನಾಡಿದ ಯುವ ವಾಗ್ಮಿಗಳು, ಪುಟ್ಟರಾಜ ಗವಾಯಿಗಳ ಶಿಷ್ಯರಾದ ಸುಂಟನೂರ ಸಂಸ್ಥಾನ ಹಿರೇಮಠದ ಬಂಡಯ್ಯ ಸ್ವಾಮೀಜಿ ಅವರು, ಶರಣರು ವಚನಗಳಲ್ಲಿ ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ ಎಂದು ಬರೆದಿದ್ದಾರೆ. ಆದರೆ, ಪುಟ್ಟರಾಜ ಗವಾಯಿಗಳು ಇಲ್ಲಿಯೂ ಸಲ್ಲದವರನ್ನು ಅಲ್ಲಿಯೂ ಸಲ್ಲದವರನ್ನು ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಲಹಿ ಎಲ್ಲಿಯೂ ಸಲ್ಲದವರನ್ನ ಜಗತ್ತಿನಲ್ಲಿ ಸಲ್ಲುವ ಹಾಗೆ ಮಾಡಿದ್ದಾರೆ. ಜಾತಿ, ಮತ, ಕುಲವೆನ್ನದೆ ಸರ್ವ ಜನಾಂಗದ ಶಾಂತಿಯ ತೋಟ ಎಂದು ಸಂಗೀತ, ಸಾಹಿತ್ಯ , ನಾಟಕ ಶಿಕ್ಷಣದ ಜೊತೆಗೆ ಲಕ್ಷಾಂತರ ಮಕ್ಕಳಿಗೆ ಸಂಸ್ಕಾರ ನೀಡುವ ಮಹಾನ ಸಂತರು ಎಂದರು. ಖ್ಯಾತ ಜ್ಯೋತಿಷಿಗಳಾದ ಸಿದ್ದೇಶ್ವರ ಶಾಸ್ತ್ರಿಗಳು ಮಾತನಾಡಿ, ಪುಟ್ಟರಾಜ ಗವಾಯಿಗಳು ಭಾರತ ದೇಶದ ಅಗ್ರಗಣ್ಯ ಮಾನ್ಯರು ಇವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ಮರಣೋತ್ತರವಾಗಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಕೊಡಬೇಕು ಎಂದು ಆಗ್ರಹಿಸಿದರು.