ವಿವಿಧ ಜಿಲ್ಲೆಗಳ 1500ಕ್ಕೂ ಅಧಿಕ ಕಾರ್ಯಕರ್ತರು ಭಾಗಿ ವಿಕಲಚೇತನರ ಅನಿರ್ದಿಷ್ಟಾವಧಿ ಧರಣಿ ಆರಂಭ
ಕಲಬುರಗಿ:ಸೆ.14-ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ವಿಕಲಚೇತನರ ಗೌರವಧನ ಪುನರ್ವಸತಿ ಕಾರ್ಯಕರ್ತರ ಸೇವೆ ಕಾಯಂಗೊಳಿಸಬೇಕೆಂದು ಒತ್ತಾಯಿಸಿ ನವ ಕರ್ನಾಟಕ ಎಂ.ಆರ್.ಡಬ್ಲ್ಯು/ವಿ.ಆರ್.ಡಬ್ಲ್ಯು/ಯು.ಆರ್.ಡಬ್ಲ್ಯು ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ನೇತೃತ್ವದಲ್ಲಿ ವಿಕಲಚೇತನರು ಇಂದಿನಿಂದ ಇಲ್ಲಿನ ಸಾರ್ವಜನಿಕ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಇಲಾಖೆಯ ಅಧೀನದಲ್ಲಿ ಸುಮಾರು 6860 ತಾಲೂಕು ಪುನರ್ವಸತಿ ಕಾರ್ಯಕರ್ತರು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು ಗೌರವಧನ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕಾರ್ಯಕರ್ತರು ಕಳೆದ 15 ವರ್ಷಗಳಿಂದ ಅತ್ಯಂತ ಕನಿಷ್ಠ ಗೌರವ ಧನ ಪಡೆಯುತ್ತಾ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಕೇವಲ ರೂ.9000/- ಗೌರವಧನ ಪಡೆಯುತ್ತಿದ್ದಾರೆ. ಹೀಗೆ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರು ವಿಕಲಚೇತನರೇ ಆಗಿದ್ದು, ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲಿ ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಕಾರ್ಯನಿರ್ವಹಿಸುತ್ತಾ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಹಿತ ಕಾಯುವುದರಲ್ಲಿ ಮುಂಚೂಣಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ, ಈ ಪುನರ್ವಸತಿ ಕಾರ್ಯಕರ್ತರ ಸೇವೆ ಕಾಯಂಗೊಳಿಸಬೇಕು. ಒಂದುವೇಳೆ, ಸೇವೆ ಕಾಯಂಗೊಳಿಸುವುದು ಸಾಧ್ಯವಿಲ್ಲ ಎನ್ನುವುದಾದರೆ ಕನಿಷ್ಠ ವೇತನ ಜಾರಿಗೊಳಿಸಬೇಕೆಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ.ಅಂಬಾಜಿ ಪಿ.ಮೇಟಿ ಒತ್ತಾಯಿಸಿದರು.
ರಾಜ್ಯಾಧ್ಯಕ್ಷ ಫಕೀರ್‍ಗೌಡ ಪಾಟೀಲ್, ರಾಜ್ಯ ಗೌರವಾಧ್ಯಕ್ಷ ದತ್ತಾತ್ರೇಯ ಕುಡಕಿ, ರಾಜ್ಯಾಧ್ಯಕ್ಷ (ಸಲಹಾ ಸಮಿತಿ) ಮಂಜುನಾಥ ಹೆಬ್ಬಾರ್, ರಾಜ್ಯ ಉಪಾಧ್ಯಕ್ಷ ಬಿ.ಕೆ.ಹರೀಶ್, ರಾಜ್ಯ ಕಾರ್ಯದರ್ಶಿ ಕೆ.ಎಸ್.ಚಂದಯ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ 1000ಕ್ಕೂ ಅಧಿಕ ವಿಕಲಚೇತನ ಪುನರ್ವಸತಿ ಕಾರ್ಯಕರ್ತರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.