ಬಳ್ಳಾರಿಯ ಕಾಂಗ್ರೆಸ್ ನಲ್ಲಿ ಶೀತಲ ಸಮರಬುಡಾ ಅಕ್ರಮ  ಶಾಸಕರಿಂದ ದೂರು
*  ಅಕ್ರಮದ ಬಗ್ಗೆ ಪ್ರತಾಪ್ ರೆಡ್ಡಿ ಎಚ್ಚರಿಸಿದ್ದರು
*  ಅಕ್ರಮದ ಬಗ್ಗೆ ಬಹಿರಂಗ  ಪ್ರತಿಕ್ರಿಯೆಗೆ  ನಕಾರ
* ಅಕ್ರಮ ಎಂಬುದು ಈಗಷ್ಟೇ ಅಲ್ಲ ಹಿಂದೆಯೂ ಆಗಿದೆಯಂತೆ
* ಆಂಜನೇಯಲು ನಿರ್ಧಾರಗಳಿಗೆ ಶಾಸಕರ ಅಸಮ್ಮತಿ
ಎನ್.ವೀರಭದ್ರಗೌಡ
ಬಳ್ಳಾರಿ, ಅ.04: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಂತೆ ಬಳ್ಳಾರಿ ಪ್ರಾಧಿಕಾರದಲ್ಲಿಯೂ ಸೈಟ್ ಹಂಚಿಕೆ, ಲೇಔಟ್ ಗಳಿಗೆ ಅನುಮತಿ, ಸಿಎ ಸೈಟ್ ಹಂಚಿಕೆ ಅಕ್ರಮಗಳು ನಡೆದಿರುವುದಂತೂ ಸತ್ಯ ಈ ಬಗ್ಗೆ ಮುಡಾದಂತೆ ಸಮಗ್ರ ತನಿಖೆಯಾಗಬೇಕಿದೆ.
ಈಗ ಬುಡಾ ಅಧ್ಯಕ್ಷರ ಮತ್ತು ಶಾಸಕರ ನಡುವಿನ ಶೀತಲ ಸಮರ ಎರಡು ಸಭೆಗಳ ನಡಾವಳಿಗೆ ಸೀಮಿತವಾಗಿ ತನಿಖೆ ನಡೆದಿದೆ. ಸಮಗ್ರ ತನಿಖೆಯಾಗಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ರಾಜ್ಯ ರಾಜಕಾರಣದಲ್ಲಿ ತಲ್ಲಣ ಮೂಡಿಸಿರುವ ಮೂಡ ಹಗರಣ ಮುಖ್ಯ ಮಂತ್ರಿ‌ ಕುರ್ಚಿಗೆ ಸಂಚಾಕಾರವಾಗಿ ಪರಿಣಮಿಸಿರುವ ಇಂದಿನ ದಿನಗಳಲ್ಲಿ  ಬಳ್ಳಾರಿಯ ಬೂಡದಲ್ಲೂ ನಡೆದಿರುವ ಇಲಾಖೆಯ ಅಧಿಕಾರಿಗಳ ತನಿಖೆಯಿಂದ ಏನೆಲ್ಲ ಬೆಳವಣಿಗೆಗೆ ಕಾರಣವಾಗಲಿದೆಂದು ಕಾದು ನೋಡಬೇಕಿದೆ.
ಈ ತನಿಖೆಯಿಂದ ಹಾಲಿ ಶಾಸಕ ಭರತ್ ರೆಡ್ಡಿ ವರ್ಸಸ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆಂಜನೇಯಲು  ನಡುವಿನ ಮುಸಿಕಿನ ಗುದ್ದಾಟ ಬಯಲಿಗೆ ಬಂದಂತಾಗಿದೆ.
ಆಂಜನೇಯಲು ಅವರು ಏಕ ನಿವೇಶನಗಳ ರಚನೆಗೆ ಸಂಬಂಧಿಸಿ, ಸಿ ಸೈಟ್ ಗಳ ಹಂಚಿಕೆ ವಿಷಯದಲ್ಲಿ ಎಲ್ಲರ ಸಮ್ಮತಿ ಪಡೆದಿಲ್ಲ ಎಂಬುದು ಪ್ರಮುಖ ಕಾರಣವಾಗಿದೆಯಂತೆ. ಬಲ್ಲ ಮೂಲಗಳ ಪ್ರಕಾರ  ಬಿ.ಗೋನಾಳ್ ಲೇಔಟ್ ಅಭಿವೃದ್ಧಿ ಕಾಮಗಾರಿ ವಿಷಯದಲ್ಲೂ ಶಾಸಕರು ಮತ್ತು ಬುಡಾ ಅಧ್ಯಕ್ಷರ ನಡುವೆ ಶೀತಲ ಸಮರ ನಡೆದಿದೆಯಂತೆ.  ಶಾಸಕರ ಬೆಂಬಲಿಗರು ಕಾಮಗಾರಿ ಮಾಡುತ್ತಿದ್ದು ಅದು ಕಳಪೆಯಾಗಿದೆ ಎಂದು ಬುಡಾ ಅಧಕ್ಷರು ಅಲ್ಲಿಗೆ ಹೋಗದೆ ಸರ್ಕಾರಕ್ಕೆ ದೂರು ನೀಡಿದ್ದಾರಂತೆ.
ಒಟ್ಟಾರೆ ಶಾಸಕರ, ಬುಡಾ ಅಧ್ಯಕ್ಷರ ಶೀತಲ ಸಮರದಿಂದ ಬಳ್ಳಾರಿ ಬುಡಾದಲ್ಲಿ ನಡೆದ ಅಕ್ರಮಗಳು ಬಯಲಿಗೆ ಬಂದರೆ ಸಾಕು ಎಂಬುದು ಜನರ ಅಭೀಪ್ಸೆಯಾಗಿದೆ.
ಬುಡಾ ಅಧ್ಯಕ್ಷ ಸ್ಥಾನದ ಹುದ್ದೆಗೆ ಕಳೆದ ಫೆಬ್ರವರಿ 28ರಂದು ನನ್ನ ನೇಮಕ ಮಾಡಲಾಯಿತು. ಮಾರ್ಚ್ ನಲ್ಲಿ ನಡೆದ ಸಭೆಗೆ ಭರತ್ ಶಾಸಕರಾಗಿರಲಿಲ್ಲ. ನಂತರ ಜುಲೈನಲ್ಲಿ ನಡೆದ ಸಭೆಗೆ ಕರೆದರೂ ಅವರು ಬಂದಿರಲಿಲ್ಲ. ಸಭೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಸಭೆಯಲ್ಲಿ ಬುಡಾ  ಸದಸ್ಯರು, ಅಧಿಕಾರಿಗಳು ಇದ್ದರು.  ನಾನು ಖಾಸಗಿ ಕಾರ್ಯಕ್ರಮಗಳಲ್ಲಿ ಇರುವುದರಿಂದ ಕಚೇರಿ ಕಡೆ ಹೋಗಿಲ್ಲ. ತನಿಖೆ ನಡೆದಿದೆ ಸತ್ಯ ಹೊರ ಬರಲಿದೆ.
ಜೆ.ಎಸ್.ಆಂಜನೇಯಲು
ಅಧ್ಯಕ್ಷರು, ಬುಡಾ ಬಳ್ಳಾರಿ.
ತನಿಖೆಗೆ ಸರ್ಕಾರದ ಆದೇಶ
ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯ ಆಯುಕ್ತರಿಗೆ ಪತ್ರ ಬರೆದು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ  ಕಳೆದ ಮಾ 7 ಮತ್ತು  ಜುಲೈ 8 ಸಭೆಯ ನಡವಳಿಯನ್ನು ರದ್ದುಪಡಿಸಲು ಆದೇಶಿಸಿದ್ದು ಅಲ್ಲದೆ ತನಿಖೆ ನಡೆಸಿ ವಾರದಲ್ಲಿ ವರದಿ ನೀಡಲು ಸೂಚಿಸಿದ್ದಾರೆ.
ಕಂಪ್ಲಿ ಶಾಸಕ ಗಣೇಶ್ ಮತ್ತು ನಗರ ಶಾಸಕ ಭರತ್ ರೆಡ್ಡಿ ಅವರು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಈ ಎರೆಡು ಸಭೆಯ ನಡವಳಿಗಳಲ್ಲಿ ಅಕ್ರಮ ನಡೆದಿರುವ ಕುರಿತು ಸಾರ್ವಜನಿಕರಿಂದ ಹಲವಾರು ದೂರುಗಳು ಬಂದಿವೆ, ಇತ್ತೀಚಿಗೆ ನಡೆದ ಲೋಕಾಯುಕ್ತ ಪ್ರಕರಣದಲ್ಲಿ ಸಂಬಂಧಿಸಿದ ಅಧಿಕಾರಿಗಳು ಟ್ಯಾಪ್ ಆಗಿದ್ದಾರೆ.  ಸಭೆಯ ಎರಡೂ ನಡವಳಿಗಳಲ್ಲಿ ಸಾಕಷ್ಟು ಅಕ್ರಮವಾಗಿದೆ ಹಾಗೂ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ತಮ್ಮ ಅಧಿಕಾರ ವ್ಯಾಪ್ತಿಯನ್ನು ದುರುಪಯೋಗಪಡಿಸಿಕೊಂಡು ನಿಯಮ ಮೀರಿ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆಂದು ದೂರು ಸಲ್ಲಿಸಿದ್ದರಂತೆ.
ಅದಕ್ಕಾಗಿ ಈ ಇಬ್ಬರು ಶಾಸಕರ ದೂರನ್ನು ಪರಗಣಿಸಿ ನಗರಾಭಿವೃದ್ಧಿ ಸಚಿವರೂ ಸಹ  ಎರೆಡು ಸಭೆಗಳ ನಡಾವಳಿ ರದ್ದು ಪಡಿಸಿ ತನಿಖೆಗೆ ಆದೇಶಿಸಿದ್ದರಂತೆ.
ಇನ್ನು ಮುಂದೆ ಸಭೆಯಲ್ಲಿ ಕೈಗೊಳ್ಳಲಿರುವ ನಿರ್ಣಯಗಳನ್ನು  ಶಾಸಕರುಗಳ ಗಮನಕ್ಕೆ ತಂದು ನಿರ್ಣಯಿಸಬೇಕೆಂದು ಹೇಳಲಾಗಿದೆ.
ಸಭೆಯ ನಡವಳಿಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಹಾಗೂ ಸಭಾ ನಡವಳಿಯನ್ನು ರದ್ದುಪಡಿಸುವ ಕುರಿತು ನಿಯಮಾನುಸಾರ ಪರಿಶೀಲಿಸಿ ವರದಿ ನೀಡಲು ಸೂಚಿಸಿದೆ.
ಈ ಹಿನ್ನಲೆಯಲ್ಲಿ ನಿನ್ನೆಯಿಂದ ಬುಡಾದಲ್ಲಿ ಧಾರವಾಡ ವಲಯ ಕಚೇರಿಯ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ ನಾಳೆಗೆ ಪರಿಶೀಲನೆ ಮುಗಿಸಿ ಈ ತಂಡ ವರದಿ ನೀಡಲಿದೆ.