ಇನ್ನೊಬ್ಬರನ್ನು ಬೆಳೆಸುವ ಗುಣ ಡಾ.ವಿಸಾಜಿಯವರಲ್ಲಿತ್ತು : ಡಾ.ಬಸವಲಿಂಗ ಪಟ್ಟದ್ದೇವರು
ಭಾಲ್ಕಿ:ಸೆ.14: ತಾನು ಬೆಳೆದು ಇನ್ನೊಬ್ಬರನ್ನು ಬೆಳೆಸುವ ಗುಣ ಈ ನಾಡಿನ ಹಿರಿಯ ಸಾಹಿತಿ ಡಾ| ಜಿ.ಬಿ.ವಿಸಾಜಿಯವರಲ್ಲಿತ್ತು ಎಂದು ನಾಡೋಜ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ವಸಾಜಿ ನಿವಾಸದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ| ಜಿ.ಬಿ.ವಿಸಾಜಿ ಶ್ರದ್ಧಾಂಜಲಿ ಸಮಾರಂಭದ ನುಡಿನಮನ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು. ಡಾ| ಜಿ.ಬಿ.ವಿಸಾಜಿಯವರು ಈ ಭಾಗದ ಸಾಹಿತ್ಯ ಲೋಕದ ಅನಘ್ಯ ರತ್ನರಾಗಿದ್ದರು. ನನಗೆ ಶರಣರ ನಾಡಿನಲ್ಲಿ ಚನ್ನಬಸವ ಪಟ್ಟದ್ದೇವರು ಸೇರಿದಂತೆ 30 ಲೇಖನಗಳನ್ನು ಬರೆಯುವಲ್ಲಿ ಡಾ|ಜಿ.ಬಿ. ವಿಸಾಜಿಯವರು ಪ್ರೇರಣಾದಾಯಕರಾಗಿದ್ದರು. ನಾನು ಸಾಹಿತಿಯಾಗಿ ಹೊರಹೊಮ್ಮಲು ಜಿ.ಬಿ.ವಿಸಾಜಿಯವರೇ ಕಾರಣರು. ಈ ಹಿಂದೆ ಅವರು ಆರೋಗ್ಯವಾಗಿದ್ದಾಗ ಶ್ರೀಮಠದ ಎಲ್ಲಾ ಕಾರ್ಯಗಳು ಅವರ ಸಲಹೆ ಮತ್ತು ಸೂಚನೆಯ ಮೇರೆಗೆ ನಡೆಯುತ್ತಿದ್ದವು. ಶ್ರಾವಣ ಪ್ರವಚನದ ವಿಷಯವೂ ಅವರಿಂದಲೇ ಸೂಚಿಸಲಾಗುತ್ತಿತ್ತು. ಅದರಂತೆ ತಯ್ಯಾರಿನಡೆಸಿ ನಾನು ಪ್ರವಚನ ಮಾಡುತ್ತಿದ್ದೆ ಎಂದು ವಿಸಾಜಿಯವರೊಂದಿಗೆ ನೆನಪುಗಳನ್ನು ಮೆಲುಕು ಹಾಕಿದರು.
ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಹುಟ್ಟು ಸಾವಿನ ಮಧ್ಯದ ಬದುಕು ಸಾರ್ಥಕ ಬದುಕಾಗಿಸುತ್ತದೆ. ಅಂತಹ ಬದುಕು ಸಾಧಿಸಿದ ವ್ಯಕ್ತಿ ಡಾ| ಜಿ.ಬಿ.ವಿಸಾಜಿಯವರಾಗಿದ್ದರು ಎಂದು ಹೇಳಿದರು.
ಗುರುದೇವಾಶ್ರಮ ಬೀದರ ಹಾಗು ಬಬಚ್ಛಡಿ ಮಠದ ಶ್ರೀ ಗಣೇಶಾನಂದ ಮಹಾರಾಜರು ಮಾತನಾಡಿ, ಶಿಷ್ಯರನ್ನು ರೂಪಿಸುವಲ್ಲಿ ಡಾ| ವಿಸಾಜಿಯವರು ಎತ್ತಿದ್ದ ಕೈ ಯಾಗಿದ್ದರು. ಅವರಿಂದ ಪಾಠ ಕಲಿತ ಹಲವಾರು ವಿದ್ಯಾರ್ಥಿಗಳು ಇಂದು ಎತ್ತರದ ಮಟ್ಟದ್ದಲ್ಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ನಾನೂ ಡಾ| ಜಿ.ಬಿ.ವಿಸಾಜಿಯವರ ವಿದ್ಯಾರ್ಥಿಯಾಗಿದ್ದೆ, ವಿಸಾಜಿಯವರು ತನ್ನಷ್ಟಕ್ಕೇ ತಾನು ಏನೂ ಮಾಡಿಕೊಂಡಿಲ್ಲ, ಇನ್ನೊಬ್ಬರಿಗಾಗಿ ದುಡಿಯುವ ಜೀವ ಅವರಾಗಿದ್ದರು. ಅವರ ಅಗಲಿಕೆ ನಮ್ಮೆಲ್ಲರಿಗೂ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಜಿಲ್ಲೆಯ ಸಾಹಿತಿಗಳಾದ ಡಾ| ಜಗನ್ನಾಥ ಹೆಬ್ಬಾಳೆ, ಪ್ರೊ| ಸಿದ್ರಾಮಪ್ಪ ಮಾಸಿಮಾಡೆ, ಪ್ರೊ| ಚಂದ್ರಶೇಖರ ಬಿರಾದಾರ, ಪ್ರೊ| ವೈಜಿನಾಥ ಭಂಡೆ, ಅನುಭವ ಮಂಟಪ ಬಸವಕಲ್ಯಾಣದ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ, ಡಾ| ಜಿ.ಬಿ.ವಿಸಾಜಿಯವರ ಸಾರ್ಥಕ ಬದುಕಿನ ಸಾಧನೆಯ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ಶಂಕರಲಿಂಗ ಸ್ವಾಮೀಜಿ, ಶಿವಾನಂದ ಗುಂದಗೆ, ಶಿವಕುಮಾರ ಸ್ವಾಮಿ, ಓಂಪ್ರಕಾಶ ರೊಟ್ಟೆ, ಜಯರಾಜ ದಾಬಶೆಟ್ಟೆ, ಸೋಮನಾಥ ಮುದ್ದಾ, ಗಣಪತಿ ಬೋಚರೆ, ಮೋಹನ ರೆಡ್ಡಿ, ಗಣಪತಿ ಭೂರೆ, ಚನ್ನಬಸವ ವಿಸಾಜಿ, ವಿಕ್ರಮ ವಿಸಾಜಿ, ರಸವಂತಿ, ಪ್ರಕೃತಿ, ಶಾಲಿವಾನ ಕನಕಟ್ಟೆ, ಬಾಬುರಾವ ವಿರಶೆಟ್ಟೆ, ಶರಣಯ್ಯಾ ಮಠಪತಿ, ಕಿರಣಕುಮಾರ ಖಂಡ್ರೆ, ನವಲಿಂಗ ಪಾಟೀಲ, ಪ್ರೊ| ಅಂಕುಶ ಢೋಲೆ, ಸೋಮನಾಥ ಮೈನಾಳೆ, ನಿಜಲಿಂಗಪ್ಪ ತಗಾರೆ ಉಪಸ್ಥಿತರಿದ್ದರು.
ಚನ್ನಬಸವ ವಿಸಾಜಿ ಸ್ವಾಗತಿಸಿದರು. ನವಲಿಂಗ ಪಾಟೀಲ ನಿರೂಪಿಸಿದರು. ವಿಕ್ರಮ ವಿಸಾಜಿ ವಂದಿಸಿದರು.