ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿ ಆಗಬೇಕು: ಸಂಸದ ಜಿಗಜಿಣಗಿ ಒತ್ತಾಯ
ವಿಜಯಪುರ,ಸೆ.14: ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿಯಾಗಬೇಕು ಎನ್ನುವುದು ನನ್ನ ಬಹುದಿನಗಳ ಆಸೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇಲ್ಲಿಯವರೆಗೆ ಒಬ್ಬ ದಲಿತನೂ ಮುಖ್ಯಮಂತ್ರಿ ಆಗಿಯೇ ಇಲ್ಲ. ರಾಜ್ಯದ ದಲಿತರು ಪಾಪ ಮಾಡಿದ್ದರೆಯೇ? ಇಲ್ಲವೆ ಅವರು ಅಯೋಗ್ಯರೆ? ಎಂದು ಖಾರವಾಗಿ ಪ್ರಶ್ನಿಸಿದರು.
ದಲಿತ ಮುಖ್ಯಮಂತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷವೂ ದಲಿತರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿ ಕೇಂದ್ರದಲ್ಲಿ ಕೂರಿಸಿದೆ. ಅವರನ್ನು ತಂದು ರಾಜ್ಯದಲ್ಲಿ ಏಕೆ ಮುಖ್ಯಮಂತ್ರಿ ಮಾಡಬಾರದು ಎಂದರು.
ಯಾವುದೇ ಪಕ್ಷದಲ್ಲಾಗಲಿ ಒಬ್ಬ ದಲಿತನನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ. ನೆರೆ- ಹೊರೆ ರಾಜ್ಯಗಳಲ್ಲಿ ದಲಿತರು ಮುಖ್ಯಮಂತ್ರಿಗಳಾಗಿ ಹೋಗಿದ್ದಾರೆ. ನಮ್ಮ ರಾಜ್ಯದಲ್ಲಿಯೇ ಈವರೆಗೆ ಒಬ್ಬ ದಲಿತರು ಮುಖ್ಯಮಂತ್ರಿಯಾಗಿಲ್ಲ. ರಾಜ್ಯದ ದಲಿತರು ಪಾಪಿಷ್ಠರಾ ? ಸಿಎಂ ಬದಲಾವಣೆ ಮಾಡಿದರೆ ದಲಿತರನ್ನು ಮುಖ್ಯಮಂತ್ರಿ ಮಾಡಲಿ ಎನ್ನುವುದು ನನ್ನ ಇಚ್ಚೆ ಎಂದರು.