ಜನರು ನಮ್ಮ ದೇಶದ ಕಾನೂನು ತಿಳಿದುಕೊಳ್ಳಬೇಕು:ನ್ಯಾ.ಪ್ರಕಾಶ ಬನಸೋಡೆ
ಬೀದರ, ಸೆ.14: ಜನರು ನಮ್ಮ ದೇಶದ ಕಾನೂನನ್ನು ಸರಿಯಾಗಿ ತಿಳಿದುಕೊಂಡಾಗ ಮಾತ್ರ ಅಫರಾಧಗಳ ಸಂಖ್ಯೆ ಕಡಿಮೆಯಾಗುತ್ತವೆ. ಅಫರಾದ ಮಾಡುವ ಬಹಳಷ್ಟು ಜನರಿಗೆ ಕಾನೂನಿನ ಅರಿವು ಇರುವುದಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರನ ಪ್ರಕಾಶ ಬನಸೋಡೆ ಹೇಳಿದರು.
ಅವರು ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಬೀದರ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕುರಿತು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸ್ವ-ಸಹಾಯ ಗುಂಪಿನ ಸದಸ್ಯರು ಹಾಗೂ ಸ್ವಯಂ ಸೇವಾ ಸಂಸ್ಥೆಯವರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗೆ ಪುರಾತನ ಕಾಲದಿಂದಲೂ ನಮ್ಮ ದೇಶದಲ್ಲಿ ಗೌರವದಿಂದ ಕಾಣುವುದರ ಜೊತೆಗೆ ಪೂಜ್ಯನೀಯ ಭಾವದಿಂದ ನೋಡಲಾಗುತ್ತದೆ. ಆದರೆ ಇತ್ತಿಚೆಗೆ ಮಹಿಳೆಯರ ಮೇಲೆ ಬಹಳಷ್ಟು ರೀತಿಯಲ್ಲಿ ದೌರ್ಜನ್ಯಗಳನ್ನು ನಡೆಯುತ್ತಿರುವುದನ್ನು ಕಾಣುತ್ತಿದ್ದೆವೆ. ಮಹಿಳೆಯರ ರಕ್ಷಣೆಗಾಗಿ ಹಲವಾರು ಕಾಯ್ದೆ ಕಾನೂನುಗಳಿದ್ದು, ತಮ್ಮ ಮೇಲೆ ದೌರ್ಜನ್ಯಗಳಾದಾಗ ಸುಮ್ಮನಿರದೆ ಕಾನೂನಿನ ಮೂಲಕ ನ್ಯಾಯ ಪಡೆಯಬೇಕೆಂದರು.
ಮಹಿಳೆ ಯಾವಾಗ ಮಧ್ಯ ರಾತ್ರಿಯಲ್ಲಿ ನಿರ್ಭಯವಾಗಿ ಓಡಾಡುವಳು ಅಂದು ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ ಎಂದು ಹೇಳಿದ್ದರು. ಕಾನೂನಿನ ಅರಿವು ಇಲ್ಲದ ಕಾರಣ ಜನರು ಬಹಳಷ್ಟು ತಪ್ಪುಗಳನ್ನು ಮಾಡುತ್ತಾರೆ. ದೇಶದ ಜನರಿಗೆ ಕನಿಷ್ಟ ಕಾನೂನಿನ ಅರಿವು ಇರಬೇಕು. ಒಂದು ಕಡೆ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದರೆ ಇನ್ನೊಂದು ಕಡೆ ಮಹಿಳೆಯರ ಮೇಲೆ ವಿವಿಧ ರೀತಿಯಲ್ಲಿ ದೌರ್ಜನ್ಯಗಳು ನಡೆಯುತ್ತಿವೆ ಎಂದರು.
ಹೆಣ್ಣು ಭ್ರೂಣಲಿಂಗ ಹತ್ಯೆ, ಬಾಲ್ಯ ವಿವಾಹ, ವರದಕ್ಷಿಣೆ ಕಿರುಕೂಳ, ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡುವುದು ಇಂತಹ ಹಲವಾರು ಸಾಮಾಜಿಕ ಪಿಡುಗುಳ ನಿರ್ಮೂಲನೆಯಲ್ಲಿ ಸಾರ್ವಜನಿಕರ ಪಾತ್ರವು ಬಹಳ ಮುಖ್ಯ ಇದೆ. ವರದಕ್ಷಿಣೆ ಸಾವಿಗೆ ಜೀವಾವಧಿ ಶಿಕ್ಷೆ ಇದೆ. ಸೊಸೆಯನ್ನು ತಮ್ಮ ಮಗಳಂತೆ ಕಾಣಬೇಕು, ಅಪ್ರಾಪ್ತ ವಯಸ್ಸಿನ ಬಾಲಕಿ ಮದುವೆಗೆ ಒಪ್ಪಿದರು ಇದು ಅಫರಾಧವಾಗುತ್ತದೆ ಎಂದು ಹೇಳಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಬೆ ಮಾತನಾಡಿ, ಜನರ ಮತ್ತು ಸರಕಾರದ ಕೊಂಡಿಯಾಗಿ ಸ್ವಯಂ ಸೇವಾ ಸಂಸ್ಥೆಗಳು ಕೆಲಸ ಮಾಡುತ್ತವೆ. ನಮ್ಮ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಮೇಲೆ ಯಾವುದೇ ದೌರ್ಜನ್ಯ ಪ್ರಕರಣಗಳು ನಡೆಯಬಾರದು ಎಂಬ ಉದ್ದೇಶದಿಂದ ಜಿಲ್ಲಾಡಳಿತದ ವತಿಯಿಂದ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮ ದೇಶದಲ್ಲಿ ಪ್ರತಿ 3 ನಿಮಿಷಕ್ಕೆ ಒಂದು ಬಾಲ್ಯ ವಿವಾಹ ನಡೆಯುತ್ತದೆ. ನಮ್ಮ ಜಿಲ್ಲೆಯಲ್ಲಿ ನೂರು ಮದುವೆಗಳಲ್ಲಿ 19 ಬಾಲ್ಯ ವಿವಾಹಗಳು ನಡೆಯುತ್ತವೆ ಇಂತಹ ಅನಿಷ್ಟ ಪದ್ದತಿಗಳನ್ನು ನಿರ್ಮೂಲನೆ ಮಾಡಬೇಕಿದೆ. ಮಕ್ಕಳ ಸಹಾಯವಾಣಿ ಸಂಖ್ಯೆ 1098 ಹಾಗೂ ಮಹಿಳಾ ಸಹಾಯವಾಣಿ ಸಂಖ್ಯೆ. 181 ಆಗಿದ್ದು ತಮ್ಮ ಮೇಲೆ ಯಾವುದೇ ರೀತಿಯಲ್ಲಿ ದೌರ್ಜನ್ಯಗಳಾದರೆ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಮಾತನಾಡಿ, ಈ ಕಾರ್ಯಾಗಾರದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಮತ್ತು ಇಲ್ಲಿ ಹೇಳಿದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೌರ್ಜನ್ಯಕ್ಕೆ ಒಳಗಾದವರು ಸುಮ್ಮನಿರದೆ ತಮ್ಮ ಮೇಲೆ ಯಾವುದೇ ರೀತಿಯಲ್ಲಿ ದೌರ್ಜನ್ಯವಾದರೆ ಅದರ ವಿರುದ್ಧ ಧ್ವನಿ ಎತ್ತಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾದಾಗ ಮಾತ್ರ ಅವರು ಪುನಃ ತಪ್ಪುಗಳನ್ನು ಮಾಡುವುದಿಲ್ಲ ಎಂದು ಹೇಳಿದರು.
ವಕೀಲರಾದ ಅಂಬುಜಾ ಅವರು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿ, ನಮ್ಮ ದೇಶದಲ್ಲಿ ನಿರ್ಭಯಾದಂತಹ ಹಲವಾರು ಪ್ರಕರಣಗಳು ಇವೆ. ಇಂತಹ ಅಪರಾಧಗಳಿಗೆ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ ಮರಣದಂಡನೆಯಂತಹ ಕಠಿಣ ಶಿಕ್ಣೆಯಾಗಲಿದೆ. ಸರಕಾರ ಮಹಿಳೆಯರ ರಕ್ಷಣೆಗಾಗಿ ಹಲವಾರು ಕಾಯ್ದೆ ಕಾನೂನುಗಳನ್ನು ಜಾರಿಗೆ ತಂದರು ಹಲವಾರು ದೌರ್ಜನ್ಯಗಳು ಮಹಿಳೆಯರ ಮೇಲೆ ನಡೆಯುತ್ತಲೆ ಇವೆ. ದೌರ್ಜನ್ಯಕ್ಕೆ ಒಳಗಾದವರು ಸರಿಯಾದ ಸಾಕ್ಷಿ ನೀಡಿದಲ್ಲಿ ಅಫರಾಧಿಗಳಿಗೆ ತಕ್ಕ ಶಿಕ್ಷೆಯಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕರಾದ ಶ್ರೀಧರ್, ಹೆಚ್ಚುವರಿ ಪೆÇಲೀಸ್ ಅಧಿಕ್ಷಕರಾದ ಚಂದ್ರಕಾಂತ ಪೂಜಾರ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸ್ವ-ಸಹಾಯ ಗುಂಪಿನ ಸದಸ್ಯರು, ಸ್ವಯಂ ಸೇವಾ ಸಂಸ್ಥೆಯವರು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.