ವಿಜಯಪುರ ಜಿಲ್ಲೆ: ಏಳು ದಿನಗಳ ಗಣೇಶ ಮೂರ್ತಿಗಳ ವಿಸರ್ಜನೆ
ವಿಜಯಪುರ,ಸೆ.14: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಏಳು ದಿನಗಳ ಗಣೇಶ ಮೂರ್ತಿಯನ್ನು ಭವ್ಯ ಮೆರವಣಿಗೆ ಮೂಲಕ ಕೊಂಡ್ಯೊಯ್ದು ವಿಧಿ ವಿಧಾನಗಳ ಮೂಲಕ ಶುಕ್ರವಾರ ವಿಸರ್ಜಿಸಲಾಯಿತು.
ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಗಣೇಶ ಉತ್ಸವದ ಮಹಾ ಮಂಡಳಿಗಳು ಪ್ರತಿಷ್ಠಾಪನೆ ಮಾಡಿದ ಗಣೇಶನ ಮೂರ್ತಿಗಳನ್ನು ಏಕಕಾಲಕ್ಕೆ ಸಾಮೂಹಿಕವಾಗಿ ವಿಸರ್ಜನೆ ಮಾಡಲಾಯಿತು.
ಅರ್ಚಕರು ಗಣೇಶ ಮೂರ್ತಿಗಳಿಗೆ ವಿಧಿ ವಿಧಾನಗಳ ಮೂಲಕ ಪೂಜಾ ವಿಧಾನಗಳನ್ನು ನೆರವೇರಿಸಿದರು. ನಂತರ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿದ ಸಾಲಂಕೃತ ರಥದಲ್ಲಿ ಗಣೇಶ ಮೂರ್ತಿಗಳನ್ನು ಭಕ್ತಿಭಾವದಿಂದ ಇಟ್ಟು ಭವ್ಯ ಮೆರವಣಿಗೆ ಮೂಲಕ ವಿಸರ್ಜನೆಗೆ ಕೊಂಡ್ಯೊಯಲಾಯಿತು. ನಗರದ ಶಿವಾಜಿ ವೃತ್ತ, ಸರಾಫ್ ಬಜಾರ್ ವೃತ್ತ, ಗಾಂಧಿ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ ಹೀಗೆ ಎಲ್ಲ ಕಡೆಗಳಲ್ಲೂ ಗಣೇಶನ ಉತ್ಸವಮೂರ್ತಿಗಳ ಭವ್ಯ ಮೆರವಣಿಗೆ ನೋಡಲು ಎರಡು ಕಣ್ಣುಗಳು ಸಾಲದಾದವು.
ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ ಎಲ್ಲ ಗಣೇಶ ಮೂರ್ತಿಗಳನ್ನು ಮೆರವಣಿಗೆ ಮೂಲಕ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ತಾಜ್ ಬಾವಡಿ, ಸ್ಯಾಟ್‍ಲೈಟ್ ಬಸ್ ನಿಲ್ದಾಣ ಮತ್ತಿತರ ಕಡೆ ನಿಗದಿಪಡಿಸಿದ್ದ ವಿಶೇಷ ಹೊಂಡಗಳಲ್ಲಿ ಪೂಜೆ ಸಲ್ಲಿಸಿ ಗಣೇಶ ಮೂರ್ತಿಗಳನ್ನು ಭಕ್ತಿಭಾವದಿಂದ ವಿಸರ್ಜಿಸಲಾಯಿತು. ಸಕಲ ಇಷ್ಟಾರ್ಥಗಳನ್ನು ಈಡೇರಿಸುವಂತೆ, ಸಮೃದ್ಧಿ ಕರುಣಿಸುವಂತೆ ವಿಘ್ನ ನಿವಾರಕನಲ್ಲಿ ಪ್ರತಿಯೊಬ್ಬರು ಪ್ರಾರ್ಥಿಸಿದರು.
ನಾಸಿಕ್, ಪುಣೆ, ಸೊಲ್ಲಾಪೂರ ಮೊದಲಾದ ಕಡೆಗಳಿಂದ ಆಗಮಿಸಿದ ಡೋಲ್, ತಾಷಾ, ಸಂಬಾಳ ಕಲಾವಿದರ ಕೈಚಳಕದಲ್ಲಿ ಮೊಳಗಿದ ಸಂಗೀತದ ಹಿಮ್ಮೆಳನ ಎಲ್ಲೆಡೆ ಪ್ರತಿಧ್ವನಿಸಿತು. ಡಿಜೆಗಳ ಅಬ್ಬರದಲ್ಲಿ, ಗಣಪತಿ ಬಪ್ಪಾ ಮೋರಯ್ಯಾ…, ಸಿಂಧೂರ ಲಾಲ್…, ಸುಖ ಹರತಾ ದುಃಖ ಹರತಾ… ಸೇರಿದಂತೆ ಗಣೇಶ ಸ್ತುತಿಯ ಭಕ್ತಿಪೂರ್ಣ ಗೀತೆಗಳಿಗೆ ಯುವಕರು ದನಿಗೂಡಿಸಿದರು. ಡಿಜೆ ಧ್ವನಿಯಲ್ಲಿ ಅಮಿತೋತ್ಸಾಹದಿಂದ ನೃತ್ಯ ಮಾಡಿ ಸಂಭ್ರಮಿಸಿದರು. ಅನೇಕ ಯುವಕರು ಗುಲಾಲು ಎರಚಿ ಸಂಭ್ರಮಿಸಿದರು. ನಸುಕಿನ 4 ಗಂಟೆವರೆಗೂ ಮೆರವಣಿಗೆ ವೈಭವ ಕಂಗೋಳಿಸಿತು.
ಸಂಪ್ರದಾಯದಂತೆ ಗಜಾನನ ಮಹಾಮಂಡಳ ವತಿಯಿಂದ ಗಣೇಶ ಮಂಡಳಿಗಳ ನೇತೃತ್ವದಲ್ಲಿ ಬರುವ ಮೆರವಣಿಗೆಯನ್ನು ಗಾಂಧಿ ವೃತ್ತದಲ್ಲಿ ಸ್ವಾಗತಿಸುವ ಹಾಗೂ ಸ್ವಾಮಿ ವಿವೇಕಾನಂದ ಸೇನೆ ಗಜಾನನ ಮಹಾಮಂಡಳದವರು ಸಿದ್ಧೇಶ್ವರ ದೇವಾಲಯದ ಮುಂಭಾಗದಲ್ಲಿ ಮೆರವಣಿಗೆಗೆ ಸ್ವಾಗತಿಸಿದರು. ಪರಿಸರ ಸ್ನೇಹಿ ಗಣೇಶ, ಉತ್ತಮ ಅಲಂಕಾರ, ಶಿಸ್ತುಬದ್ದ ಮೆರವಣಿಗೆ ಮೊದಲಾದ ವಿಭಾಗಗಳಲ್ಲಿ ಗಣೇಶ ಮಂಡಳಿಗಳಿಗೆ ಬಹುಮಾನ ವಿತರಿಸಲಾಯಿತು.