ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೆ ಕೈ ಜೋಡಿಸಿ: ಸಚಿವ ಎಂ.ಬಿ. ಪಾಟೀಲ ಕರೆ
ವಿಜಯಪುರ,ಸೆ.14: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸೆ.15 ರಂದು ಆಯೋಜಿಸಲಾದ ಮಾನವ ಸರಪಳಿ ರಚನೆ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವÀ ಡಾ. ಎಂ.ಬಿ. ಪಾಟೀಲ ಅವರು ಕರೆ ನೀಡಿದ್ದಾರೆ.
ಸಂವಿಧಾನದ ಆಶಯಗಳಾದ ಸ್ವಾತ್ರಂತ್ರ್ಯ ಸಮಾನತೆ, ಭ್ರಾತೃತ್ವದಂತಹ ಆದರ್ಶಗಳನ್ನು ಸಾರ್ವಜನಿಕರಲ್ಲಿ ಗಟ್ಟಿಗೊಳಿಸುವ ದಿಶೆಯಲ್ಲಿ ಬೀದರದಿಂದ ಚಾಮರಾಜನಗರದವರೆಗೆ ಸುಮಾರು 2,500 ಕಿ.ಮಿ ಮಾನವ ಸರಪಳಿ ರಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ರಾಯಚೂರು ಗಡಿಭಾಗದ ಮುದ್ದೇಬಿಹಾಳ ತಾಲೂಕಿನ ವಿರೇಶನಗರದಿಂದ ನಿಡಗುಂದಿ ತಾಲೂಕಿನ ಆಲಮಟ್ಟಿಯಯವರೆಗೆ ಸುಮಾರು 62 ಕೀ.ಮಿ. ಮಾನವ ಸರಪಳಿ ಕಾರ್ಯಕ್ರಮ ಆಯೋಜನೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ನಾಗರಿಕರು, ಶಾಲಾ ಕಾಲೇಜು, ವಸತಿ ನಿಲಯದ ವಿದ್ಯಾರ್ಥಿಗಳು, ಮಹಿಳಾ ಸ್ವಸಹಾಯ ಸಂಘಗಳು, ವಿವಿಧ ಸಂಘ ಸಂಸ್ಥೆಗಳು, ಸಂಘಟನೆಗಳು, ಸರ್ಕಾರಿ, ಸರ್ಕಾರೇತರ ಅಧಿಕಾರಿಗಳು, ಹಾಗೂ ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.