ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆಯುವಂತೆ ಆಗ್ರಹ
ಕೆಂಭಾವಿ : ಸೆ.14:ಸರಕಾರ ವಕ್ಫ್ ತಿದ್ದುಪಡಿ ಮಸೂದೆ -2024ರ ಮೂಲಕ ಅಲ್ಪಸಂಖ್ಯಾತ ಸಮುದಾಯದ ಆರ್ಥಿಕ ಮೂಲಕ್ಕೆ ಕೊಡಲಿ ಪೆಟ್ಟು ಕೊಡಲು ಹೊರಟಿದ್ದು, ಕೂಡಲೇ ಕೇಂದ್ರ ಸರಕಾರ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ಅಂಜುಮನ್ ಬೈತುಲ್ ಮಾಲ್ ಮತ್ತು ಚಾರಿ ಟೇಬಲ್ ಟ್ರಸ್ಟ್ ಹಾಗೂ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ವತಿಯಿಂದ ಕೆಂಭಾವಿ ಉಪತಹಸೀಲ್ದಾರ್ ಅವರ ಮೂಲಕ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರು ಮತ್ತು ಇತರ ಸದ್ಯಸರು ಸಂಸತ್ ಭವನ ನವದೆಹಲಿ ಇವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಅಂಜುಮನ್ ಬೈತುಲ್ ಮಾಲ್ ಉಪಾಧ್ಯಕ್ಷರಾದ ಅಬ್ದುಲ್ ರಜಾಕ್ ಸಾಸನೂರ್ ಹಾಗೂ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆಯ ಅಧ್ಯಕ್ಷರಾದ ಬಂದೇನವಾಜ್ ನಾಲತವಾಡ ಜಂಟಿಯಾಗಿ ಮನವಿ ಸಲ್ಲಿಸಿ ಮಾತನಾಡಿದ ಅವರು,
ವಕ್ಫ್‍ಗಳ ಸ್ಥಿತಿಗತಿಗಳಲ್ಲಿ ಸುಧಾರಣೆಯ ನೆಪದಲ್ಲಿ ವಕ್ಫ್ ವ್ಯವಸ್ಥೆಯಿಂದ ಪ್ರಯೋಜನಗಳನ್ನು ಕಸಿದುಕೊಳ್ಳುವ ಗುರಿಯೊಂದಿಗೆ ಮುಸ್ಲಿಂ ಸಮುದಾಯದ ಆಸ್ತಿಗಳಿಗೆ ಸರಿಪಡಿಸಲಾಗದ ಹಾನಿಯನ್ನುಂಟುಮಾಡಲು ಬಿಜೆಪಿ ಬಯಸಿದೆ. ಇದು ಬಿಜೆಪಿ ಪ್ರಣಾಳಿಕೆ 2019ಕ್ಕೆ ವಿರುದ್ಧವಾಗಿದೆ.
ವಕ್ಫ್‍ಗಳು ಜಾತ್ಯತೀತ ಮೌಲ್ಯಗಳಿಗೆ ವಿರುದ್ಧವಾಗಿದೆ ಮತ್ತು ವಕ್ಫ್‍ಗಳನ್ನು ತೆಗೆದುಹಾಕಬೇಕು ಎಂದು ಆರೋಪಿಸಿ ಬಿಜೆಪಿ ವಕ್ಫ್‍ಗಳ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದೆ. ಇದು ಬಿಜೆಪಿಯ ಕೆಟ್ಟ ಅಜೆಂಡಾ ಹೊರತು ಬೇರೇನೂ ಅಲ್ಲ.
ವಕ್ಫ್ ಮಸೂದೆಯಲ್ಲಿನ ತಾರತಮ್ಯವು ಸ್ಪಷ್ಟವಾಗಿದೆ, ಇದು ಸಾಮಾನ್ಯ ತತ್ವಗಳು ಮತ್ತು ನೆಲದ ಇತ್ಯರ್ಥ ಕಾನೂನಿಗೆ ವಿರುದ್ಧವಾಗಿದೆ ಇದನ್ನು ಮುಸ್ಲಿಂ ಸಮಾಜ ಖಂಡಿಸುತ್ತೇದೆ ಎಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಬಿ. ಝೆಡ್, ನಾಲತವಾಡ, ಬಾಬಾ ತಾಳಿಕೋಟಿ, ಮಹಮ್ಮದ ಎಸ್.ಕೆ, ಷರೀಫ್ ಸಂಗ್ರಮ್, ಹನೀಫ್ ಸಾಸನೂರ್, ಇಲ್ಯಾಸ್ ಪಟೇಲ್ ಬಳಗಾನೂರ, ಫಯಾಜ್ ಸಾಹೇಬ್, ಮಾಶಾಕ್ ಮಲಗಾಣ, ಅತ್ತು ಖಾಜಿ, ಸದ್ದಾಂ ಪಟ್ಟೆದಾರ್, ಮುಸ್ತಫಾ ಕಲಿಫಾ, ಶಾಹನಾವಜ್, ಸದ್ದಾಂ, ಇಮ್ರಾನ್ ಹಾಗೂ ಇತರರು ಇದ್ದರು.