ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಸಕಲ ಸಿದ್ಧತೆ
ಧಾರವಾಡ, ಸೆ14: ಜಿಲ್ಲೆಯಲ್ಲಿ ಸೆಪ್ಟೆಂಬರ್ 15, 2024 ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ 51 ಕಿಲೋಮೀಟರ್‍ವರೆಗೆ ಮಾನವ ಸರಪಳಿ ನಿರ್ಮಿಸಲಾಗುವುದು. ಸುಮಾರು 79 ಸಾವಿರ ಜನ ಪಾಲ್ಗೋಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಜರುಗಿಸಿ, ಮಾತನಾಡಿದರು.
ಪ್ರಜಾಪ್ರಭುತ್ವವು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಭದ್ರ ಬುನಾದಿಯ ಮೇಲೆ ನಿಂತಿದೆ ಈ ಭದ್ರ ಬುನಾದಿಯು ಬಲಿಷ್ಠವಾಗದಿದ್ದರೆ ಪ್ರಜಾಪ್ರಭುತ್ವವೇ ಬಲಿಷ್ಠವಾಗದು. ಆದ್ದರಿಂದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಆದರ್ಶಗಳು ಭಾರತೀಯ ಸಂವಿಧಾನ ಪೀಠಿಕೆಯ ಭಾಗವಾಗಿದೆ ಎಂದು ಅವರು ಹೇಳಿದರು.
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ದೇಶದ ನಾಗರೀಕರಿಗೆ ವಿಶೇಷವಾಗಿ ರಾಜ್ಯದ ನಾಗರೀಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಪ್ರಸಕ್ತ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಬೀದರ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೆ ಸುಮಾರ 2,500 ಕಿಲೋಮೀಟರ್ ಮಾನವ ಸರಪಳಿ ರಚಿಸುವ ಮೂಲಕ ಸೆಪ್ಟೆಂಬರ್ 15, 2024 ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲು ಸರ್ಕಾರವು ತೀರ್ಮಾನಿಸಿದೆ ಎಂದು ಜಿಲ್ಲಧಿಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿ ಸಹ ಮಾನವ ಸರಪಳಿ ಕಾರ್ಯಕ್ರಮವು ಬೆಳಗಾವಿ ಜಿಲ್ಲಾ ಸರಹದ್ದು ತೇಗೂರ ಗ್ರಾಮದಿಂದ ಪ್ರಾರಂಭವಾಗಿ ಗುಳೇದಕೊಪ್ಪ, ವೆಂಕಟಾಪೂರ, ಶಿಂಗನಹಳ್ಳಿ, ಕೋಟೂರ, ಬೇಲೂರ, ಮುಮ್ಮಿಗಟ್ಟಿ. ಕೆ.ಎಂ. ನರೇಂದ್ರ, ಜುಬ್ಲಿ ಸರ್ಕಲ್‍ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರಲಿದ್ದು ನಂತರ ಸಲಕಿನಕೊಪ್ಪ, ಬಾಡ, ಬೆನಕನಕಟ್ಟಿ, ನಿಗದಿ, ಬೋಮ್ಮಸಿರಿಕೊಪ್ಪ, ಮುರಕಟ್ಟಿ, ಹಳ್ಳಿಗೇರಿ, ಹುತ್ತಿಕೋಟಿ ಹಾಗೂ ಉತ್ತರ ಕನ್ನಡ ಜಿಲ್ಲೆ ಸರಹದ್ದು ಮಾವಿನಕೊಪ್ಪ ಗ್ರಾಮದ ವರೆಗೆ ಒಟ್ಟು 51 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.