ಪ್ರಜಾಪ್ರಭುತ್ವ ದಿನಾಚಾರಣೆ ಪ್ರಯುಕ್ತ ಮಾನವ ಸರಪಳಿ:ಜಿ.ಪಂ. ಸಿ.ಇ.ಓ. ಅವರಿಂದ ಸಿದ್ಧತೆ ಪರಿಶೀಲನೆ
ಕಲಬುರಗಿ,ಸೆ.14:ಇದೇ ಸೆಪ್ಟೆಂಬರ್ 15 ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚಾರಣೆ ಪ್ರಯುಕ್ತ ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲೂಕಿನ ಕಿಣ್ಣಿಸಡಕ ಗ್ರಾಮದಿಂದ ನಾಲವಾರ ಗ್ರಾಮ ಪಂಚಾಯತಿಯ ದೇವಲನಾಯಕ ತಾಂಡಾ ಜಿಲ್ಲೆಯ ಗಡಿಭಾಗದವರೆಗೆ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಶುಕ್ರವಾರ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪೂರ್ವ ಸಿದ್ಧತೆ ಪರಿಶೀಲಿಸಿದರು.
ಅವರು ಶುಕ್ರವಾರ ಕಿಣ್ಣಿಸಡಕ್ ಗ್ರಾಮದಿಂದ ಕಲಬುರಗಿ ರಿಂಗ್ ರೋಡ್ ವರೆಗೆ ಹಾಗೂ ಶಹಾಬಾದ್ ರಿಂಗ್ ರೋಡ್ ಕ್ರಾಸ್‍ನಿಂದ ನಾಲವಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವಲನಾಯಕ ತಾಂಡಾ ಜಿಲ್ಲೆಯ ಗಡಿಭಾಗಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿ, ಕೈಗೊಂಡಿರುವ ಪೂರ್ವಸಿದ್ದತೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಂತರ ಮಾತನಾಡಿ, ಮಾನವ ಸರಪಳಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಗಿದ್ದು, ಕಾರ್ಯಕ್ರಮದಲ್ಲಿ ಯಾವುದೇ ಲೋಪದೋಷವಾಗದಂತೆ ಕಾರ್ಯನಿರ್ವಹಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಅಧಿಕಾರಿಗಳು/ಸಿಬ್ಬಂದಿ ವರ್ಗದವರು, ಜನಪ್ರತಿನಿಧಿಗಳು, ಶಾಲಾ ಮಕ್ಕಳು, ಸಂಘ ಸಂಸ್ಥೆಗಳು, ಸರಕಾರಿ ನೌಕರರು ಹಾಗೂ ಸಾರ್ವಜನಿಕರು ಭಾಗವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು (ಮಾರ್ಗ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು, ಜಿಲ್ಲಾ ನೋಡಲ್ ಅಧಿಕಾರಿಗಳು ಹಾಗೂ ವಿಶೇಷ ನೋಡಲ್ ಅಧಿಕಾರಿಗಳು) ಉಪಸ್ಥಿತರಿದ್ದರು.