ಮನಸ್ಸನ್ನು ಗೆದ್ದವನೇ ಮಹೇಶ್ವರ : ಹಾರಕೂಡ ಶ್ರೀ
ಬಸವಕಲ್ಯಾಣ:ಸೆ.14: ಮನೋಶಕ್ತಿ ಎಂಬುದು ಅದ್ಭುತವಾದ ಸಾಧನೆಗಳಿಗೆ ಪೂರಕ ಇಂಧನ ಒದಗಿಸುತ್ತದೆ, ಮನಸ್ಸನ್ನು ಗೆದ್ದವನೇ ಮಹೇಶ್ವರ.
ಯಾವುದೇ ಒಂದು ಮಹತ್ಕಾರ್ಯದ ಸಾಧನೆಗೆ ಮನೋಬಲ, ಆತ್ಮಬಲ ಅತ್ಯಂತ ಪ್ರಬಲ ಪಾತ್ರ ವಹಿಸುತ್ತದೆ ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಏಕಲಾರ ವಾಡಿ ಗ್ರಾಮದ ಹನುಮಾನ ಮಂದಿರ ಕಳಸಾರೋಹಣ ಹಾಗೂ ಶ್ರಾವಣ ಮಾಸದ ಸಮಾಪ್ತಿ ಮತ್ತು ಹಾರಕೂಡ ಹಾಗೂ ಬಬಲಾದ ಶ್ರೀಗಳ ತುಲಾಭಾರ ಕಾರ್ಯಕ್ರಮದ ಸನ್ನಿಧಾನ ವಹಿಸಿ ಮಾತನಾಡಿದ ಪೂಜ್ಯರು,
ಚಂಚಲತೆ ಹಾಗೂ ಆತ್ಮಸ್ಥೈರ್ಯವಿಲ್ಲದ ಮನಸ್ಸು ಏನನ್ನು ಸಾಧಿಸಲಾಗದು, ಮನಸ್ಸು ಬುದ್ದಿಯ ನಿಯಂತ್ರಣ ದಲಿಡುವುದೂ ಒಂದು ಸಾಧನೆ. ತನ್ನ ಶಕ್ತಿ ಸಾಮಥ್ರ್ಯದ ಅರಿವು ಗೊತ್ತಾದಾಗಲೆ ಮನುಷ್ಯ ಅತ್ಯುನ್ನತ ಸಾಧನಾ ಶಿಖರ ತಲುಪಲು, ಯಶಸ್ಸಿನ ಸಾರ್ಥಕ ಹೆಜ್ಜೆ ಇಡಲು ಸಾಧ್ಯವಾಗುತ್ತದೆ.
ಜಾಂಬವಂಥ ಆಂಜನೇಯನಿಗೆ ಅವನಲ್ಲಿರುವ ಅಗಾಧ ಶಕ್ತಿಯ ಅರಿವು ಮೂಡಿಸಿದಾಗ, ಸಾಗರೋಲ್ಲಂಘನ ಮಾಡಿ ಲಂಕೆಯ ಅಶೋಕ ವನದಲ್ಲಿರುವ ಸೀತಾಮಾತೆಯನ್ನು ಕಾಣುವಂತಾಯಿತು.
ದೃಢಸಂಕಲ್ಪ, ಅಚಲವಾದ ಮನಸ್ಸು, ಒಮ್ಮತದ ನಿರಂತರ ಪ್ರಯತ್ನ, ದೈವತ್ವದ ಮೇಲಿನ ವ್ಯಾಕುಲತೆಯಿಂದ ಕೂಡಿದ ಭಕ್ತಿಯಿಂದ ಗ್ರಾಮಗಳಲ್ಲಿ ಹೊಸ ಹೊಸ ಕೆಲಸ ಕಾರ್ಯಗಳು ಸಿದ್ಧಿಸುತ್ತವೆ.
ಏಕಲೂರ ವಾಡಿ ಪುಟ್ಟ ಗ್ರಾಮವಾದರೂ ದೈವ ಭಕ್ತಿ ಹಾಗೂ ಗುರು ಭಕ್ತಿಯಲ್ಲಿ ದಿಟ್ಟತನ ಮೆರೆದಿರುವುದು ನಮಗೆ ಖುಷಿ ತಂದಿದೆ.
ಶ್ರೀರಾಮಚಂದ್ರನಲ್ಲಿ ಹನುಮನು ಇಟ್ಟಿರುವ ಭಕ್ತಿ ಶ್ರದ್ಧೆ ಲೋಕಮಾನ್ಯವಾದುದು, ಅಂತಹದೇ ಗುರು ನಿಷ್ಠೆ ಏಕಲೂರವಾಡಿ ಗ್ರಾಮಸ್ಥರು ನಮ್ಮ ಮೇಲೆ, ಹಾರಕೂಡ ಮಠದ ಮೇಲೆ ಇಟ್ಟಿರುವುದು ಇಲ್ಲಿ ನಾವು ಸಾಕ್ಷಿಕರಿಸಿಕೊಂಡಿದ್ದೇವೆ ಎಂದು ತೃಪ್ತಿಯಿಂದ ಹೇಳಬಯಸುತ್ತೇವೆ.
ಹನುಮನ ಎದೆಯಲ್ಲಿ ಸೀತಾರಾಮ ಇರುವಂತೆ ಏಕಲೂರ ವಾಡಿ ಗ್ರಾಮಸ್ಥರ ಹೃದಯದಲ್ಲಿ ಹಾರಕೂಡ ಚೆನ್ನಬಸವ ಶಿವಯೋಗಿಗಳು ಸದಾ ಜಾಗ್ರತರಾಗಿರುತ್ತಾರೆ ಎನ್ನುವುದಕ್ಕೆ ಇವತ್ತಿನ ಸಮಾರಂಭವೇ ನಿದರ್ಶನ.
ನಮಗೂ ಹಾಗೂ ಪೂಜ್ಯ ಬಬಲಾದ ಶ್ರೀಗಳಿಗೂ ಅತ್ಯಂತ ವೈಭವದಿಂದ ವೇದಿಕೆಗೆ ಕರೆತಂದು ತುಲಾಭಾರ ಸೇವೆ ಮಾಡಿರುವುದು ಏಕಲೂರವಾಡಿ ಗ್ರಾಮದ ಭಕ್ತಿ ಪರಂಪರೆಯ ಇತಿಹಾಸದಲ್ಲಿ ಸ್ವರ್ಣಮಯ ಗಳಿಗೆಯೇ ಸರಿ, ಇಂತಹ ಧರ್ಮ ಕಾರ್ಯಗಳು ಮೇಲಿಂದ ಮೇಲೆ ನಡೆಯುತ್ತಿರುವ ಗ್ರಾಮಗಳು ಪರಂಧಾಮಗಳಾಗಿ ಮಾರ್ಪಡುವುದರಲ್ಲಿ ಸಂದೇಹವಿಲ್ಲ.
ಪವನ ಪುತ್ರ ಆಂಜನೇಯನ ಶಕ್ತಿ ಸಾಮಥ್ರ್ಯದ ನಿಧಿಯಾಗಿದ್ದು, ಹನುಮಂತನ ಕೃಪೆಯಿಂದ ಏಕಲೂರವಾಡಿ ಗ್ರಾಮಸ್ಥರೆಲ್ಲರೂ ಚೈತನ್ಯಶೀಲರಾಗಿ ಬದುಕುವಂತಾಗಲಿ ಹಾಗೂ ಹಾರಕೂಡನ ಚನ್ನಬಸವ ಶಿವಯೋಗಿಗಳು ಎಲ್ಲರ ಬಾಳಲ್ಲಿ ಮಂಗಳವನ್ನುಂಟು ಮಾಡಲಿ ಎಂದು ಶುಭ ಹಾರೈಸಿದರು.
ಬಬಲಾದ ಗುರುಪಾದಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು.
ಲಿಂಗರಾಜ ಜಮಾದಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ದೇವಸ್ಥಾನ ಅಧ್ಯಕ್ಷರಾದ ಅಣ್ಣಾರಾಯ ಜಮಾದಾರ,
ಕಾರ್ಯದರ್ಶಿ ಸುನೀಲ ಕುಮಾರ, ಲೋಹಿತ ಕುಮಾರ,
ಅಂಬಾರಾಯ ಚಿಂತಲೆ, ವಿಠ್ಠಲ ಸಿದ್ದಪ್ಪ ಚಿಂತಲೆ
ನಾಮದೇವ ಚಿಂತಲೆ ಮುಂತಾದವರು ಉಪಸ್ಥಿತರಿದ್ದರು.
ಕಾರ್ತಿಕ ಸ್ವಾಮಿ ಯಲಗುಂಡಿ ಮತ್ತು ದಿಲೀಪ ದೇಸಾಯಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
ಲೋಹಿತ್ ಜಮಾದಾರ ನಿರೂಪಿಸಿದರು.
ಶಿವಶರಣಪ್ಪ ಚಿಂತಲೆ ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಅಲಂಕೃತ ಸಾರೋಟಿನಲ್ಲಿ ಹಾರಕೂಡ ಮತ್ತು ಬಬಲಾದ ಪೂಜ್ಯರ ಅದ್ದೂರಿ ಮೆರವಣಿಗೆ ಜರುಗಿತು.
ಚಿತ್ರ : ಬಸವಕಲ್ಯಾಣ ತಾಲೂಕಿನ ಏಲೂರವಾಡಿ ಗ್ರಾಮದ ಹನುಮಾನ ಮಂದಿರ ಕಳಸಾರೋಹಣ ಹಾಗೂ ಶ್ರಾವಣ ಮಾಸದ ಸಮಾಪ್ತಿ ಮತ್ತು ಹಾರಕೂಡ ಹಾಗೂ ಬಬಲಾದ ಶ್ರೀಗಳ ತುಲಾಭಾರ ಸಮಾರಂಭವನ್ನು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.
ಬಬಲಾದನ ಪೂಜ್ಯ ಗುರುಪಾದಲಿಂಗ ಮಹಾಸ್ವಾಮಿಗಳು, ಅಣ್ಣಾರಾಯ ಜಮಾದಾರ, ಸುನೀಲ ಕುಮಾರ, ಲೋಹಿತ ಕುಮಾರ,
ಅಂಬಾರಾಯ ಚಿಂತಲೆ, ವಿಠ್ಠಲ ಸಿದ್ದಪ್ಪ ಚಿಂತಲೆ,
ನಾಮದೇವ ಚಿಂತಲೆ, ಅಪ್ಪಣ್ಣ ಜನವಾಡ ಮುಂತಾದವರು ಉಪಸ್ಥಿತರಿದ್ದರು.