ಸಹಕಾರ ಇಲಾಖೆಯ ೧ ವರ್ಷದ ಸಾಧನೆ ಪುಸ್ತಕ ಬಿಡುಗಡೆ
ತುಮಕೂರು, ಸೆ. ೧೪- ರಾಜ್ಯದಲ್ಲಿ ಸಹಕಾರ ಇಲಾಖೆಯ ೨೦೨೩-೨೪ನೇ ಸಾಲಿನ ೧ ವರ್ಷದ ಸಾಧನೆ ಕುರಿತು “ಜನಸಾಮಾನ್ಯರತ್ತ ಸಹಕಾರ ಇಲಾಖೆ, ಸರ್ಕಾರದ ಚಿತ್ತ ಅಭಿವೃದ್ಧಿಯತ್ತ ಹಾಗೂ ವರ್ಷ ಒಂದು ಹರ್ಷ ಹಲವು, ಪ್ರಗತಿಯ ಪಥದತ್ತ ಸಹಕಾರ ಇಲಾಖೆ” ಎಂಬ ಶೀರ್ಷಿಕೆಯಡಿ ಹೊರತರಲಾಗಿರುವ ಪುಸ್ತಕವನ್ನು ಸಹಕಾರ ಸಚಿವ ಕೆ.ಎನ್. ರಾಜಣ್ಣ ಇಂದಿಲ್ಲಿ ಬಿಡುಗಡೆ ಮಾಡಿದರು.
ನಗರದ ಡಿಸಿಸಿ ಬ್ಯಾಂಕ್ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಹಕಾರ ಇಲಾಖೆಯ ೧ ವರ್ಷದ ಸಾಧನೆ ಕುರಿತಾದ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಸಚಿವ ಕೆ.ಎನ್. ರಾಜಣ್ಣ ಅವರು, ಸಹಕಾರ ಇಲಾಖೆ ಜನರ ಇಲಾಖೆ. ಸಹಕಾರಿ ಕಾಯ್ದೆಯಂತೆ ಕಾರ್ಯನಿರ್ವಹಿಸದೆ ಪತ್ತಿನ ಸಹಕಾರ ಸಂಘಗಳು ತಪ್ಪು ಮಾಡಿದಾಗ ಅವುಗಳನ್ನು ಸರಿದಾರಿಗೆ ತರಲು ಹಾಗೂ ಲೋಪದೋಷಗಳನ್ನು ನಿಯಂತ್ರಿಸಲು ಇರುವ ಇಲಾಖೆ ಇದು ಎಂದರು.
ರಾಜ್ಯದ ಅರ್ಥ ವ್ಯವಸ್ಥೆಗೆ ಸಹಕಾರ ಇಲಾಖೆ ತನ್ನದೇ ಆದ ಮಹತ್ವದ ಕೊಡುಗೆಯನ್ನು ನೀಡುತ್ತಾ ಬಂದಿದೆ. ವಿವಿಧ ಇಲಾಖೆಗಳಲ್ಲಿ ಸಹಕಾರ ಇಲಾಖೆ ಜನರಿಗೆ ಹತ್ತಿರದಲ್ಲಿದ್ದು, ಪ್ರಮುಖ ಇಲಾಖೆ ಎನಿಸಿದೆ. ಜನತೆಯ ಸಂಪೂರ್ಣ ಸಹಕಾರದೊಂದಿಗೆ ಸಹಕಾರ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಸಹಕಾರ ಇಲಾಖೆಯಲ್ಲಿ ಜನಸಾಮಾನ್ಯರ ಅಗತ್ಯಗಳಿಗೆ ಸ್ಪಂದಿಸುವಂತೆ ಮಾಡಲು, ರೈತರು, ಮಹಿಳೆಯರು ಹಾಗೂ ಯುವಜನರ ಭಾವನೆಗಳಿಗೆ ಪ್ರಾಮುಖ್ಯತೆ ನೀಡುವಂತೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ರೈತರ ಜೀವನಾಡಿಗಳಂತಿರುವ ಅಪೆಕ್ಸ್ ಬ್ಯಾಂಕ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳು ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಪ್ರಸ್ತುತ ವರ್ಷ ೩೫ ಲಕ್ಷ ರೈತರಿಗೆ ೨೫ ಸಾವಿರ ಕೋಟಿ ರೂ. ಕೃಷಿ ಸಾಲ ವಿತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಸಹಕಾರಾಭಿವೃದ್ಧಿಗೆ ನೆರವಾಗುವ ಸಹಕಾರ ಸಂಘಗಳ ಕಾಯ್ದೆಗೆ ಸಮಗ್ರ ತಿದ್ದುಪಡಿ ತರಲಾಗಿದೆ. ಕಾಯ್ದೆ ತಿದ್ದುಪಡಿ ಮೂಲಕ ಸಮಾಜದ ಶೋಷಿತ ವರ್ಗ, ಅಬಲ ವರ್ಗ, ಮಹಿಳೆಯರಿಗೆ ಸಹಕಾರ ಸಂಘಗಳ ಆಡಳಿತ ಮಂಡಳಿಯಲ್ಲಿ ಪಾಲ್ಗೊಳ್ಳಲು ಅನುವಾಗುವಂತೆ ನಾಮನಿರ್ದೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಶೂನ್ಯ ಬಡ್ಡಿದರದಲ್ಲಿ ಸಾಲ
ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರಕಿಸಬೇಕು ಎಂಬುದು ಪತ್ತಿನ ಸಹಕಾರ ಸಂಘಗಳ ಧ್ಯೇಯ. ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿಯಾಗಿದ್ದಾಗಲೇ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ತೀರ್ಮಾನ ಮಾಡಲಾಗಿತ್ತು ಎಂದರು.
ಮುಂದಿನ ಚುನಾವಣೆಗೆ ಸ್ಪರ್ಧಿಸಲ್ಲ: ಕೆಎನ್‌ಆರ್
ಮುಂಬರುವ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ಹಾಗಂತ ರಾಜಕೀಯ ನಿವೃತ್ತಿಯನ್ನು ಪಡೆಯುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಸ್ಪಷ್ಟವಾಗಿ ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಗೆ ನಾನು ನಿಲ್ಲದಿದ್ದರೂ ಗೆಲ್ಲುವವರನ್ನು ಗೆಲ್ಲಿಸುತ್ತೇನೆ, ಸೋಲುವವರನ್ನು ಸೋಲಿಸುತ್ತೇನೆ ಎಂದು ಹೇಳುವ ಮೂಲಕ ವಿರೋಧಿಗಳಿಗೆ ಟಾಂಗ್ ನೀಡಿದರು.
ಮುಂದಿನ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರ್ಥವಲ್ಲ. ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ ಎಂದು ಅವರು ಹೇಳಿದರು.
ಮಧುಗಿರಿ ಜಿಲ್ಲಾ ಕೇಂದ್ರ
ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಸೂಕ್ತ ಸಮಯದಲ್ಲಿ ಜಿಲ್ಲಾ ಕೇಂದ್ರವಾಗಲಿದೆ ಎಂದು ಅವರು ತಿಳಿಸಿದರು.
ಮಧುಗಿರಿ ಜಿಲ್ಲಾ ಕೇಂದ್ರವಾಗಲು ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗಿದೆ. ಹಾಗೆಯೇ ಜಿಲ್ಲಾ ಮಟ್ಟದ ಕಚೇರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಎಲ್ಲವೂ ಲಭ್ಯ ಇರಬೇಕಾಗಿದೆ. ಹಾಗಾಗಿ ಸರಿಯಾದ ಸಮಯದಲ್ಲಿ ಮಧುಗಿರಿ ಜಿಲ್ಲಾಕೇಂದ್ರವಾಗಲಿದೆ ಎಂದರು.
ಐತಿಹಾಸಿಕ ಪ್ರಸಿದ್ದ ಏಕಶಿಲಾಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಕೆಯಾಗಲಿದೆ ಎಂದರು.
ರಾಯದುರ್ಗ-ದಾವಣಗೆರೆ ರೈಲು ಮಾರ್ಗ ಹಾಗೂ ಎತ್ತಿನ ಹೊಳೆ ಯೋಜನೆ ಇನ್ನೊಂದು ವರ್ಷದಲ್ಲಿ ಸಂಪೂರ್ಣಗೊಳ್ಳಲಿವೆ ಎಂದು ಅವರು ತಿಳಿಸಿದರು.
ಹೈಕಮಾಂಡ್ ನಿರ್ಧಾರ ಅಂತಿಮ
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಲ್ಲಿ ಹೈಕಮಾಂಡ್ ಶಕ್ತಿಯುತವಾಗಿದೆ. ಹಾಗಾಗಿ ನಮ್ಮ ಪಕ್ಷದಲ್ಲಿ ಯಾವುದೇ ವಿಚಾರ ಬಂದರೂ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಸಿಎಂ ಹುದ್ದೆ ವಿಚಾರದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದರು.