ಗಾಣಿಗರು ಮತ್ತೊಂದು ಜಾತಿಯ ಹಕ್ಕಗಳನ್ನು ಕಸಿಯುತ್ತಿಲ್ಲ  – ಉಮೇಶ. ಜಿ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಸೆ. 14 :- ಗಾಣಿಗ ಸಮುದಾಯದವರು ಯಾವುದೇ ಅಕ್ರಮ ನಡೆಸದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶ ಹಾಗೂ ಉಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಗಾಣಿಗ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದು ಮತ್ತೊಂದು ಜಾತಿಯ ಹಕ್ಕುಗಳನ್ನು ಕಸಿಯುತ್ತಿಲ್ಲ ಎಂದು ಕಲ್ಯಾಣ ಕರ್ನಾಟಕ ವಿಜಯನಗರ ಮತ್ತು  ಬಳ್ಳಾರಿ ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಜಿ ಉಮೇಶ ತಿಳಿಸಿದರು.
ಅವರು ಪಟ್ಟಣದ ತಾಲೂಕು ಕಚೇರಿ ಆವರಣದ ಮುಂದೆ  ಗಾಣಿಗ ಸಮುದಾಯವು ಹಿಂದುಳಿದ ವರ್ಗದ 2ಎ ಪ್ರಮಾಣ ಪತ್ರ ಪಡೆಯುವುದು ನಮ್ಮ ಹಕ್ಕು ಎಂದು ಘೋಷಣೆ ಕೂಗುತ್ತಾ ಪಟ್ಟಣದ ಮಹಾತ್ಮಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕದಿಂದ  ಮುಖ್ಯರಸ್ತೆಯ ಮೂಲಕ ಡಾ.ಅಂಬೇಡ್ಕರ್ ವೃತ್ತದಿಂದ ತಾಲೂಕು ಆಡಳಿತ ಸೌಧದ ಬಳಿಗೆ ಆಗಮಿಸಿದ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡುತ್ತ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಗಾಣಿಗ ಸಮುದಾಯಕ್ಕೆ ಪ್ರವರ್ಗ 2ಎ ಪ್ರಮಾಣ ಪತ್ರವನ್ನು ನೀಡುವಂತೆ ಆಗ್ರಹಿಸಿದರು.
ಜಾತಿ ಆಧರಿತ ಮೀಸಲು ಇಲ್ಲದ ಸಂದರ್ಭದಲ್ಲಿ ಜಾತಿ ಕಾಲಂನಲ್ಲಿ ಲಿಂಗಾಯತ ಗಾಣಿಗ ಎಂದು ಸೇರಿಸಿದ್ದರೂ, ಮೂಲತಃ ಎಣ್ಣೆ ಗಾಣದ ವೃತ್ತಿ ಮಾಡುತ್ತಿರುವ ಗಾಣಿಗ ಸಮುದಾಯ ಅತ್ಯಂತ ಹಿಂದುಳಿದ ವರ್ಗವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಉಚ್ಛ ನ್ಯಾಯಾಲಯಗಳ ಆದೇಶದನ್ವಯ ಈವರೆಗೆ ಗಾಣಿಗ ಸಮುದಾಯದವರಿಗೆ 2ಎ ಪ್ರಮಾಣ ಪತ್ರವನ್ನು ನೀಡಲಾಗಿದೆ. ಗಾಣಿಗ ಜಾತಿಯವರು 2ಎ ಪ್ರಮಾಣ ಪತ್ರ ಪಡೆಯಲು ಯಾವುದೇ ಸುಳ್ಳು ದಾಖಲೆಗಳನ್ನು ನೀಡುತ್ತಿಲ್ಲ ಹಾಗೂ ಮತ್ತೊಂದು ಜಾತಿಯ ಹಕ್ಕುಗಳನ್ನು ಕಸಿಯುತ್ತಿಲ್ಲ.  ಸರಕಾರದ ಸುತ್ತೋಲೆ ಮತ್ತು ನ್ಯಾಯಾಲಯಗಳ ಆದೇಶಗಳನ್ನು ಪರಿಗಣಿಸಿ ಅರ್ಜಿ ಸಲ್ಲಿಸಿದ ಗಾಣಿಗ ಸಮುದಾಯವರಿಗೆ ಹಿಂದುಳಿದ ವರ್ಗದ 2ಎ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕು  ಕಚೇರಿಯ ಶಿರಸ್ತೇದಾರ್  ಮನವಿ ಸ್ವೀಕರಿಸಿ, ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗಾಣಿಗರ ಸಂಘದ ತಾಲೂಕು ಅಧ್ಯಕ್ಷ ಎಸ್.ಶೇಖರಪ್ಪ, ಮುಖಂಡರಾದ ಜರ್ಮಲಿ ಧನಂಜಯ, ದಿನ್ನೆ ಮಲ್ಲಿಕಾರ್ಜುನ, ಹಾರಕಬಾವಿ ಸಂಗಳ್  ಕೊಟ್ರೇಶ್, ಜರ್ಮಲಿ ಶಶಿಧರ, ಬಣವಿಕಲ್ಲು ಕೆ.ನಾಗರಾಜ, ಹುರುಳಿಹಾಳ್ ಬಸವೇಶ್, ಕಾನಹೊಸಹಳ್ಳಿ ಕೊಟ್ರಪ್ಪ,  ನಿವೃತ್ತ  ಎಂಜಿನಿಯರ್ ಕಾನಾಮಡುಗು  ಶರಣಪ್ಪ, ಆಲೂರು ಕೆ.ಮಲ್ಲಿಕಾರ್ಜುನ, ಹುಲಿಕೆರೆ ಗೋನೂರು ಸ್ವಾಮಿ, ನಿಂಬಳಗೆರೆ ವಿಜಯಕುಮಾರ್, ಹುಡೇಂ ಪಿ.ಮಂಜುನಾಥ, ತುಡುಮ ಗುರುರಾಜ್, ಹೊಸಪೇಟೆ ಮಲ್ಲಿಕಾರ್ಜುನ ಕುರುಡಿ, ಹಡಗಲಿ ಕಿರಣ್ ರಾಜುವಾಳ, ಹರಪನಹಳ್ಳಿ ವಾಸುದೇವ, ಹಗರಿಬೊಮ್ಮನಹಳ್ಳಿ ಕಿ ಸುಭಾಷ್ ಕಿನ್ನಾಳ್  ಸೇರಿದಂತೆ  ತಾಲೂಕಿನ ನಾನಾ ಹಳ್ಳಿಗಳಿಂದ ಬಂದ ಮಹಿಳೆಯರು ಸೇರಿದಂತೆ  ನೂರಾರು ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು