ಪ್ರಜಾಪ್ರಭುತ್ವ ದಿನದ ಮಾನವ ಸರಪಳಿಗೆ ಸಕಲ ಸಿದ್ಧ: ದಿವಾಕರ್
ಸಂಜೆವಾಣಿ ವಾರ್ತೆ
ವಿಜಯನಗರ, ಸೆ.14: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಹಮ್ಮಿಕೊಳ್ಳುತ್ತಿರುವ ಮಾನವ ಸರಪಳಿ ಕಾರ್ಯಕ್ರಮ ಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.
ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಪ್ರಜಾಪ್ರಭುತ್ವದ ಏಕತೆ, ಸದೃಢತೆ, ಸಾಮರಸ್ಯ ಸಾರುವ ಸಂಕೇತವಾಗಿ ಮಾನವ ಸರಪಳಿ ರೂಪಿಸುವ ಮೂಲಕ ಬೃಹತ್ ಸಂವಿಧಾನದ ಜಾಗೃತಿಗಾಗಿ ಸೆ.15 ರಂದು ರಾಜ್ಯಾದ್ಯಂತ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಹೊಸಪೇಟೆ ತಾಲೂಕಿನ ಡಿಬಿ ಡ್ಯಾಂ ಗಣೇಶ ಗುಡಿಯ ಬಳಿಯ ಮೊದಲನೇ ಸೇತುವೆಯಿಂದ ಅರಂಭಗೊಂಡು ಹೊಸಪೇಟೆ ನಗರದ ಮೂಲಕ ಭುವನಹಳ್ಳಿಯವರೆಗೆ ಸುಮಾರು 40 ಕಿ.ಮೀ ಉದ್ದ ಮಾವನ ಸರಪಳಿ ನಿರ್ಮಾಣವಾಗಲಿದೆ ಎಂದರು.
ಜಿಲ್ಲೆಯ ಪ್ರೌಢಶಾಲೆ, ಹಾಸ್ಟೆಲ್ ಮತ್ತು ಕಾಲೇಜು ವಿದ್ಯಾರ್ಥಿಗಳು, ಸಂಜೀವಿನಿ, ಎನ್.ಆರ್.ಎಲ್.ಎಂ ಹಾಗೂ ಸ್ವಸಹಾಯ ಸಂಘಗಳ ಸದಸ್ಯರು, ಎನ್.ಜಿ.ಓ.ಗಳು ಮತ್ತು ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಲು ಕ್ರಮ ಕೈಗೊಳ್ಳಲಾಗು ತ್ತಿದೆ. ಮಾನವ ಸರಪಳಿಯ ಯಶಸ್ವಿಗಾಗಿ ಪ್ರತಿ 100 ಮೀಟರ್‍ಗೆ ಓರ್ವ ಸೆಕ್ಟರ್ ಅಧಿಕಾರಿ, ಪ್ರತಿ ಕಿ.ಮೀ. ಗೆ ಓರ್ವ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಿದೆ. ಮಕ್ಕಳನ್ನು ನಿಗದಿತ ಸ್ಥಳಕ್ಕೆ ಕರೆತರಲು ಶಾಲಾ ವಾಹನಗಳ ವ್ಯವಸ್ಥೆ ಕಲ್ಪಿಸಿದೆ. ಜೊತೆಗೆ ಕುಡಿಯುವ ನೀರು, ವಿದ್ಯಾರ್ಥಿಗಳಿಗೆ ಬಿಸ್ಕೇಟ್ ವಿತರಿಸಲಾಗುವುದು ಎಂದರು.
ಕಾರ್ಯಕ್ರಮದ ವೇಳಾ ಪಟ್ಟಿ:
ಸೆ.15 ರಂದು ಬೆಳಿಗ್ಗೆ 9.30 ರಿಂದ 9:37 ರ ವರೆಗೆ ಮಾನವ ಸರಪಳಿಯಲ್ಲಿ ಭಾಗವಹಿಸುವವರು ಸರತಿ ಸಾಲಿನಲ್ಲಿ ನಿಲ್ಲುವು ದು. 9:37 ರಿಂದ 9:40ರ ವರೆಗೆ ನಾಡಗೀತೆ, 9:40 ರಿಂದ 9:55 ರ ವರೆಗೆ ಹೊಸಪೇಟೆಯ ಅಂಬೇಡ್ಕರ್ ಸರ್ಕಲ್ ನಲ್ಲಿ ಮುಖ್ಯ ಅತಿಥಿಗಳ ಭಾಷಣ, 9:55 ರಿಂದ 9:57 ರ ವರೆಗೆ ಸಂವಿಧಾನ ಪ್ರಸ್ತಾವನೆ ಓದುವುದು, 9.57 ರಿಂದ 9:59 ರವರೆಗೆ 40 ಕಿ.ಮೀ. ಉದ್ದಕ್ಕೂ ಜನರು ಮಾನವ ಸರಪಳಿಯಲ್ಲಿ ಕೈ-ಕೈ ಹಿಡಿದು ನಿಲ್ಲುವುದು ಬೆಳಿಗ್ಗೆ 10 ಗಂಟೆಗೆ ಮಾನವ ಸರಪಳಿಯಲ್ಲಿಯೇ ಎರಡೂ ಕೈಗಳನ್ನು ಮೇಲೆತ್ತಿ `ಜೈ ಹಿಂದ್, ಜೈ ಕರ್ನಾಟಕ’ ಘೋಷಣೆ ಮೊಳಗಿಸಲಾಗುವುದು. ನಾಲ್ಕು ಡ್ರೋಣ್ ಕ್ಯಾಮರಾಗಳ ಮೂಲಕ ಕಾರ್ಯಕ್ರಮವನ್ನು ಚಿತ್ರೀಕರಿಸಲಾಗುತ್ತದೆ. ಭಾರತ ಸಂವಿಧಾನದ ಗೌರವ ಮತ್ತು ಘನತೆಯನ್ನು ಎತ್ತಿ ಹಿಡಿಯುವ ಕಾರ್ಯಕ್ರಮ ಇದಾಗಿದ್ದು, ಜಿಲ್ಲೆಯ ವಿದ್ಯಾರ್ಥಿಗಳು, ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್., ಜಿ.ಪಂ. ಸಿಇಒ ನೋಂಗ್ಜಾಯಿ ಮಹಮದ್ ಅಲಿ ಅಕ್ರಂ ಶಾ ಉಪಸ್ಥಿತರಿದ್ದರು.