ಹ.ಬೊ.ಹಳ್ಳಿ ಕ್ಷೇತ್ರದಲ್ಲಿ ಶೀಘ್ರವೇ ಕ್ರೀಡಾ ವಸತಿ ಶಾಲೆ ಆರಂಭ: ಕೆ ನೇಮಿರಾಜ್ ನಾಯ್ಕ್
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಸೆ.14 ಕ್ಷೇತ್ರದಲ್ಲಿ ಕ್ರೀಡಾ ವಸತಿಶಾಲೆಯನ್ನು ಶೀಘ್ರವಾಗಿ  ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಕೆ ನೇಮಿರಾಜ್ ನಾಯ್ಕ್ ಹೇಳಿದರು.
ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆ ಹಾಗೂ ಶ್ರೀ ವಿದ್ಯಾನಿಕೇತನ ಕಾಲೇಜಿನ ಸಹಯೋಗದಲ್ಲಿ ಶುಕ್ರವಾರ ನಡೆದ  ಪದವಿಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆ ಬಹಳ ಅವಶ್ಯಕವಾಗಿದೆ. ಕ್ರೀಡೆಯಲ್ಲಿ ಗಟ್ಟಿತನ ಕಾಣಬೇಕೆಂದರೆ ಹಳ್ಳಿಗಳಲ್ಲಿ ಮಾತ್ರ ಸಾಧ್ಯ. ಇಂತಹ ಮಕ್ಕಳಿಗೆ  ಕ್ರೀಡೆಯಲ್ಲಿ ಪ್ರೋತ್ಸಾಹಿಸುವ ಸಲುವಾಗಿ ಕ್ರೀಡಾ ವಸತಿ ಶಾಲೆ ಆರಂಭಿಸಲು ಸರ್ಕಾರಕ್ಕೆ ಒತ್ತಡ ಹಾಕುತ್ತೇನೆ. ಈಗಾಗಲೇ  ಕಾಲೇಜುಗಳಲ್ಲಿ ದೈಹಿಕ ಉಪನ್ಯಾಸಕ ಇಲ್ಲದಿರುವುದು ಕೂಡ ಗಮನಕ್ಕೆ ಬಂದಿದೆ. ಮುಂದಿನ ಚಳಿಗಾಲ ಅಧಿವೇಶನದಲ್ಲಿ ಸರ್ಕಾರಕ್ಕೆ ಗಮನ ಸೆಳೆಯುವಲಾಗುವುದು ಎಂದರು.
ಕ್ರೀಡಾಕೂಟದಲ್ಲಿ ಒಟ್ಟು 11 ಕಾಲೇಜುಗಳ 800ಕ್ಕೂ  ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿದ್ಯಾನಿಕೇತನ ಕಾಲೇಜಿನ  ಅಧ್ಯಕ್ಷ ಶರತ್ ಚಂದ್ರ ವಹಿಸಿದ್ದರು.
 ಪ್ರೌಢ ಶಾಲಾ ದೈಹಿಕ ಶಿಕ್ಷಕ ಎಂಪಿಎಂ ಮಂಜುನಾಥ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರ ಸಂಘದ ಅಧ್ಯಕ್ಷ ನಾಗಲಿಂಗ ಸ್ವಾಮಿ, ಹಲವು ಕಾಲೇಜಿನ ಪ್ರಾಂಶುಪಾಲರಾದ ಎಂ ಕೆ ದುರುಗಪ್ಪ, ಶ್ರೀಕಾಂತ್ ಎಂ ಆರ್ ಶೇಖರ್, ಪುರಸಭೆಯ ಸದಸ್ಯರಾದ ದೀಪಕ್ ಕಠಾರಿ, ಬಣಕಾರ್ ಸುರೇಶ್, ಜೆಡಿಎಸ್ ತಾಲೂಕ್ ಅಧ್ಯಕ್ಷ ವೈ ಮಲ್ಲಿಕಾರ್ಜುನ, ಬಿಜಿ ಬಡಿಗೇರ್ ಸಿದ್ದರಾಜು ಬಡಿಗೇರ್ ಬಸವರಾಜ್ ಇತರರಿದ್ದರು.