೫೦ ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ
ಯಾದಗಿರಿ,ಸೆ.೧೪-ಹದಿನಾಲ್ಕು ವರ್ಷದ ದಲಿತ ಸಮುದಾಯದ ಅಪ್ರಾಪ್ತ ಬಾಲಕಿ ಮೇಲೆ ೨೩ ವರ್ಷದ ಮೇಲ್ಜಾತಿ ಯುವಕನ ಮೇಲಿನ ಲೈಂಗಿಕ ದೌರ್ಜನ್ಯ ಆರೋಪವನ್ನು ಹಿಂಪಡೆಯಲು ಅಪ್ರಾಪ್ತ ದಲಿತ ಬಾಲಕಿಯ ಪೋಷಕರು ನಿರಾಕರಿಸಿದ್ದರಿಂದ ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆಯ ೫೦ ದಲಿತ ಕುಟುಂಬಗಳು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಘಟನೆ ನಡೆದಿದೆ.
೧೪ ವರ್ಷದ ದಲಿತ ಸಮುದಾಯದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂಧಾನಕ್ಕೆ ಒಪ್ಪಿಕೊಳ್ಳದ ಕುಟುಂಬ ಮತ್ತು ದಲಿತ ಕುಟುಂಬಗಳಿಗೆ ಮೇಲ್ಜಾತಿಯರು ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಾ ಗ್ರಾಮದಲ್ಲಿ ನಡೆದಿದೆ.ಅವರ ಮಾತಿನಂತೆ ಸಂಧಾನಕ್ಕೆ ಒಪ್ಪದ ದಲಿತ ಕುಟುಂಬವನ್ನು ಬಹಿಷ್ಕರಿಸಲಾಗಿದೆ ಮತ್ತು ಗ್ರಾಮದ ಅಂಗಡಿಗಳಲ್ಲಿ ದಿನಸಿ ನೀಡದಂತೆ ಷರತ್ತು ವಿಧಿಸಲಾಗಿದೆ . ಈ ಸಾಮಾಜಿಕ ಬಹಿಷ್ಕಾರದಿಂದಾಗಿ ಗ್ರಾಮದ ದಲಿತ ಸಮುದಾಯದ ಮಕ್ಕಳಿಗೆ -ಕುಟುಂಬಗಳಿಗೆ ಅಗತ್ಯವಿರುವ ಸಾಮಗ್ರಿಗಳು ಸಿಗದೆ ಹಲವು ಕುಟುಂಬಗಳು ಕಂಗಾಲಾಗಿವೆ.
ಗ್ರಾಮದಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ದಲಿತರು ಈಗ ಸಾಮಾಜಿಕ ಬಹಿಷ್ಕಾರದಿಂದ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಬಪ್ಪರಗಾ ಗ್ರಾಮದ ೧೫ ವರ್ಷದ ಬಾಲಕಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ ಪ್ರಬಲ ಜಾತಿಯ ಯುವಕ ಆಕೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.ಈಗ ಆಕೆ ೫ ತಿಂಗಳ ಗರ್ಭಿಣಿಯಾಗಿದ್ದು, ಮದುವೆಯಾಗಲು ಯುವಕ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ತಿಂಗಳ ಹಿಂದೆ ಬಾಲಕಿಯ ತಾಯಿ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಅವರೊಂದಿಗೆ ಮಾತುಕತೆ ನಡೆಸುವ ಬದಲು ನೇರವಾಗಿ ಠಾಣೆಗೆ ತೆರಳಿ ದೂರು ನೀಡಿದ್ದಾರೆ ಎನ್ನಲಾಗಿದೆ.ಇದರಿಂದ ಕೆರಳಿದ ಯುವಕನ ಕಡೆಯವರು ಪರಿಶಿಷ್ಟ ಸಮುದಾಯದವರೊಂದಿಗೆ ಯಾವುದೇ ರೀತಿಯ ವ್ಯಾಪಾರ ನಡೆಸದಂತೆ ಎಲ್ಲ ಅಂಗಡಿಗಳಿಗೂ ಎಚ್ಚರಿಕೆ ನೀಡಿ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.