ಮೈತ್ರಿ ಭಯದಿಂದ ಚುನಾವಣೆ ನಡೆಸುತ್ತಿಲ್ಲ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.14:- ಬಿಜೆಪಿ-ಜೆಡಿಎಸ್ ಮೈತ್ರಿಯ ಒಗ್ಗಟ್ಟಿನ ಭಯದಿಂದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುತ್ತಿಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಟೀಕಿಸಿದರು.
ಶುಕ್ರವಾರ ನಗರದ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಅವರು ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಟ್ಟಿ ಹಾಕುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದರು. ಆದರೂ ಕಾಂಗ್ರೆಸ್ ನೂರು ಸ್ಥಾನ ಗಳಿಸಿಬಿಟ್ಟಿದೆ. ರಾಜ್ಯದಲ್ಲಿ ಉಚಿತ ಭಾಗ್ಯಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿದೆ. ಆದರೆ ಭಾಗ್ಯಗಳ ಬಂಡವಾಳದ ಅರಿವು ಈಗ ಜನರಿಗೆ ಗೊತ್ತಾಗಿದೆ. ಹಾಗಾಗಿ ರಾಜ್ಯ ಸರ್ಕಾರದ ಆಡಳಿತ ವೈಖರಿಯ ವಿರುದ್ಧ ಜನರು ಅಸಮಾಧಾನಗೊಂಡಿದ್ದಾರೆ. ಇದರ ನಡುವೆ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸುತ್ತಿರುವುದು ಕಾಂಗ್ರೆಸ್‍ನವರಿಗೆ ಸೋಲಿನ ಭೀತಿ ಕಾಡುತ್ತಿದೆ. ಈ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಹಾಗಾಗಿಯೇ ಅವರು ಜಿ.ಪಂ, ತಾ.ಪಂ, ನಗರಪಾಲಿಕೆಗಳಿಗೆ ಚುನಾವಣೆ ನಡೆಸದೆ ಕಾಲ ದೂಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ, ಬಿಜೆಪಿ-ಜೆಡಿಎಸ್ ನಡುವೆ ಜಗಳ ತಂದಿಟ್ಟು, ಆ ಎರಡು ಪಕ್ಷಗಳು ಬೇರೆ, ಬೇರೆಯಾದ ಬಳಿಕ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುತ್ತೇವೆ ಎಂದು ಹೇಳುತ್ತಿದ್ದಾರೆ. ಆ ಮಟ್ಟಿಗೆ ಕಾಂಗ್ರೆಸ್‍ನವರಿಗೆ ಸೋಲಿನ ಭಯ ಆವರಿಸಿಕೊಂಡಿದೆ ಎಂದು ಲೇವಡಿ ಮಾಡಿದರು.
ಯಾವುದೇ ವೇಳೆಯಲ್ಲಿ ಜಿ.ಪಂ, ತಾ.ಪಂ, ನಗರಪಾಲಿಕೆಗೆ ಚುನಾವಣೆ ಎದುರಾದರೂ ಬಿಜೆಪಿ-ಜೆಡಿಎಸ್ ಒಗ್ಗೂಡಿ ಚುನಾವಣೆ ಎದುರಿಸೋಣ, ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷಕ್ಕಿಂತ ದೇಶ ದೊಡ್ಡದು. ಹಾಗಾಗಿ ಸಣ್ಣ, ಪುಟ್ಟ ಕಹಿಘಟನೆಗಳನ್ನು, ತಪ್ಪುಗಳನ್ನು ಮರೆತು ಪಕ್ಷಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ತಾವು ರೈಲ್ವೆ ಸಚಿವರಾಗಿದ್ದಾಗ ಉತ್ತರ ಕರ್ನಾಟಕ್ಕೆ ಅತಿ ದೊಡ್ಡ ರೈಲ್ವೆ ಕಾರ್ಖಾನೆ ತಂದಿರುವುದಾಗಿ ಹೇಳಿದ್ದಾರೆ. ನಾನು ಆ ಕಾರ್ಖಾನೆಗೆ ಇತ್ತೀಚೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದಾಗ, ಅಲ್ಲಿ 2 ಸಾವಿರ ಮಂದಿ ಕೆಲಸ ಮಾಡುವ ಅವಕಾಶಗಳಿದ್ದರೂ, ಕೇವಲ 50 ಮಂದಿ ಮಾತ್ರ ಕೆಲಸ ಮಾಡುತ್ತಿರುವುದು ಕಂಡು ಬರುತ್ತಿದೆ. ನಾನು ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಶೀಘ್ರದಲ್ಲೇ ಅಲ್ಲಿ 2 ಸಾವಿರ ಮಂದಿ ಕನ್ನಡಿಗರಿಗೆ ಕೆಲಸ ದೊರಕಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ನಾನು ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜನಗರ ಹಾಗೂ ವರುಣ ಎರಡೂ ಕಡೆಯಲ್ಲೂ ಸೋತಿದ್ದೂ ಒಂದು ರೀತಿಯಲ್ಲಿ ಒಳ್ಳೆಯದ್ದೇ ಆಯಿತು. ಒಂದು ವೇಳೆ ನಾನು ಶಾಸಕನಾಗಿ ಆಯ್ಕೆಯಾಗಿದ್ದರೆ, ವಿಪಕ್ಷ ನಾಯಕನಾಗಿ ನನ್ನನ್ನು ಆಯ್ಕೆ ಮಾಡಿ ಎಂದು ಪಕ್ಷದ ವರಿಷ್ಠರಲ್ಲಿ ಜಗಳ ಮಾಡಬೇಕಾಗಿತ್ತು. ಆದರೆ ಈಗ ನೋಡಿ, ನನಗೆ ಆ ಅವಕಾಶವೇ ಇಲ್ಲ. ಕೇಂದ್ರಕ್ಕೆ ಹೋಗಿ ಸಚಿವನಾಗಿದ್ದೇನೆ. ನನಗೆ ಸೋತರೂ ಕೂಡ ಒಳ್ಳೆಯ ಫಲವೇ ಸಿಕ್ಕಿದೆ ಎಂದರು.
ದೇಶಕ್ಕೆ ಭವ್ಯ ಭವಿಷ್ಯವಿದೆ. ಭಾರತ ವಿಶ್ವದ ಭೂಪಟದಲ್ಲಿ ನಂ 1 ಸ್ಥಾನಕ್ಕೆ ಹೋಗುವುದಕ್ಕೆ ಪ್ರಧಾನಿ ಮೋದಿಯವರು ಕೆಲಸ ಮಾಡುತ್ತಿದ್ದಾರೆ. ಅವರ ಈ ಆಶಯವನ್ನು ಈಡೇರಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದು ತಿಳಿಸಿದರು.
ಈ ವೇಳೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಚಿವ ಸಾ.ರಾ.ಮಹೇಶ್, ಮಾಜಿ ವಿಧಾನಪರಿಷತ್ ಸದಸ್ಯರಾದ ತೋಂಟದಾರ್ಯ, ಸಿದ್ದರಾಜು, ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ಮೈಸೂರು ನಗರಾಧ್ಯಕ್ಷರಾದ ಮಾಜಿ ಶಾಸಕ ಎಲ್.ನಾಗೇಂದ್ರ, ಗ್ರಾಮಾಂತರ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ವಿವಿಧ ನಿಗಮ ಮಂಡಳಿಗಳ ಮಾಜಿ ಅಧ್ಯಕ್ಷರುಗಳಾದ ಎಸ್.ಮಹದೇವಯ್ಯ, ಮಿರ್ಲೆ ಶ್ರೀನಿವಾಸಗೌಡ, ಕೃಷ್ಣಪ್ಪ, ಬಿಜೆಪಿ ವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್, ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಜಿ.ಗಿರಿಧರ್, ಕೇಬಲ್ ಮಹೇಶ್, ರಘು, ವಕ್ತಾರ ಎಂ.ಜಿ.ಮಹೇಶ್, ಮಾಧ್ಯಮ ಸಹ ಸಂಚಾಲಕ ಬಿ.ಎಂ.ಸಂತೋಷ್‍ಕುಮಾರ್, ಯುವ ಮೋರ್ಚಾದ ಅಧ್ಯಕ್ಷ ರಾಕೇಶ್‍ಗೌಡ ಮತ್ತಿರರರು ಉಪಸ್ಥಿತರಿದ್ದರು.