ಪ್ರಜಾಪ್ರಭುತ್ವ ದಿನಾಚರಣೆ: ಅಲ್ಪಸಂಖ್ಯಾತ ಸಮುದಾಯ ಸಹಭಾಗಿತ್ವ
ತುಮಕೂರು, ಸೆ. ೧೪- ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್‌ನಿಂದ ಚಾಮರಾಜನಗರದವರೆಗೂ ೨೫೦೦ ಕಿಲೋ ಮೀಟರ್ ಉದ್ದದ ಬೃಹತ್ ಮಾನವ ಸರಪಳಿ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಏಕಕಾಲದಲ್ಲಿ ನಡೆಯುತ್ತಿದ್ದು, ಇದರಲ್ಲಿ ಅಲ್ಪಸಂಖ್ಯಾತ ಸಮುದಾಯದ ಸಾರ್ವಜನಿಕ ಸಹಭಾಗಿತ್ವದ ಕುರಿತು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಮುಖಂಡರ ಹಾಗೂ ಸಂಘ ಸಂಸ್ಥೆಯಗಳ ಸಭೆ ಕರೆಯಲಾಗಿದೆ.
ಈ ಕುರಿತು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಶಬ್ಬೀರ್ ಅಹಮದ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಈ ಕಾರ್ಯಕ್ರಮ ಗಿನ್ನಿಸ್ ರೆಕಾರ್ಡಿಗೆ ಹೋಗುವ ಸಂಭವವಿದೆ. ಜಿಲ್ಲೆಯ ಸಿರಾ ತಾಲ್ಲೂಕಿನ ತಾವರೆಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಜ್ಜನಕುಂಟೆ ಗ್ರಾಮದಿಂದ ಪ್ರಾರಂಭವಾಗಿ ತುಮಕೂರು ತಾಲ್ಲೂಕು ಹಿರೇಹಳ್ಳಿವರೆಗೂ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯಾದ್ಯಂತ ೯೦ ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಈ ಬೃಹತ್ ಮಾನವ ಸರಪಳಿ ನಿರ್ಮಾಣದಲ್ಲಿ ಜಿಲ್ಲೆಯ ೫೦೦೦ಕ್ಕೂ ಹೆಚ್ಚು ಅಲ್ಪಸಂಖ್ಯಾತ ಸಮುದಾಯದವರನ್ನು ಸೇರಿಸಲು ಗುರಿ ಹೊಂದಲಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಸಾಮಾಜಿಕ ಕಾರ್ಯಕರ್ತ ನಿಸಾರ್ ಅಹಮದ್ (ಆರಿಫ್) ತಿಳಿಸಿದರು.
ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಎಲ್ಲಾ ಮಸೀದಿಗಳ ಮುಖ್ಯಸ್ಥರು, ಜನಾಂಗದ ಸಂಘ-ಸಂಸ್ಥೆಗಳ ಮುಂದಾಳುಗಳು ಹಾಗೂ ಸಮುದಾಯದ ಜನಪ್ರತಿನಿಧಿಗಳು ಭಾಗವಹಿಸಲು ಕೋರಲಾಗಿದೆ.
ಸಭೆಯಲ್ಲಿ ಆಡಿಟರ್ ಸುಲ್ತಾನ್ ಮಹಮದ್, ವಕ್ಫ್ ಅಧ್ಯಕ್ಷ ಅಫ್ರೋಜ್ ಅಹಮದ್, ಸಿಪಿಎಂನ ಸೈಯದ್ ಮುಜೀಬ್, ತಾಜುದ್ದೀನ್, ಮುಜಮಿಲ್, ಅಮೀಮ್, ಕಲೀಂಉಲ್ಲಾ ಮತ್ತಿತರರು ಪಾಲ್ಗೊಂಡಿದರು.