ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಸಾರ್ವಜನಿಕರ ಸಹಕಾರಕ್ಕೆ ಮನವಿ
ಗುಬ್ಬಿ, ಸೆ. ೧೪- ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಬೃಹತ್ ಮಾನವ ಸರಪಳಿ ನಿರ್ಮಾಣಕ್ಕೆ ಜಿಲ್ಲಾಡಳಿತ ಕರೆ ನೀಡಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಸಾರ್ವಜನಿಕರ ಸಂಪೂರ್ಣ ಸಹಕಾರ ಅಗತ್ಯವಿದೆ ಎಂದು ತಹಶೀಲ್ದಾರ್ ಬಿ.ಆರತಿ ಮನವಿ ಮಾಡಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಿರಾ ತಾಲ್ಲೂಕು ಉಜ್ಜನಕುಂಟೆ ಗ್ರಾಮದಿಂದ ತುಮಕೂರು ತಾಲ್ಲೂಕು ನಂದಿಹಳ್ಳಿ ಗ್ರಾಮದವರೆಗೆ ೯೦ ಕಿ.ಮೀ. ದೂರ ಮಾನವ ಸರಪಳಿ ನಿರ್ಮಿಸಿ ಪ್ರಜಾಪ್ರಭುತ್ವ ಬಗ್ಗೆ ಜಾಗೃತಿ, ಎಲ್ಲರಿಗೂ ಪರಿಚಯ ಮಾಡುವ ನಿಟ್ಟಿನಲ್ಲಿ ಆಯೋಜಿಸಲಾಗಿದೆ ಎಂದರು.
ಒಟ್ಟು ೯೦ ಕಿ.ಮೀ. ಮಾನವ ಸರಪಳಿಗೆ ಒಂದು ಕಿ.ಮೀ.ಗೆ ಒಂದು ಸಾವಿರ ಮಂದಿ ಲೆಕ್ಕದಲ್ಲಿ ಒಟ್ಟು ೯೦ ಸಾವಿರ ಮಂದಿ ಸೇರಿಸುವ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕಿಗೆ ನೀಡಿರುವ ಸೂಚನೆಯಂತೆ ಗುಬ್ಬಿ ತಾಲ್ಲೂಕು ಮೂಲಕ ನಿರೀಕ್ಷೆಗಿಂತ ಹೆಚ್ಚು ಜನರನ್ನು ಕರೆದೊಯ್ಯಲು ನಿರ್ಧರಿಸಲಾಗಿದೆ. ಹಾಗಾಗಿ ಎಲ್ಲಾ ಸಂಘ ಸಂಸ್ಥೆಗಳನ್ನು ಸಭೆಗೆ ಆಹ್ವಾನಿಸಿ ಸಾರ್ವಜನಿಕ ಕಾರ್ಯಕ್ರಮ ಯಶಸ್ವಿಗೆ ಮನವಿ ಮಾಡಲಾಗಿದೆ ಎಂದರು.
ತಾ.ಪಂ. ಇಓ ಶಿವಪ್ರಕಾಶ್ ಮಾತನಾಡಿ, ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನೂರು ಮಂದಿಯಂತೆ ಸಾರ್ವಜನಿಕರನ್ನು ಆಯಾ ಪಂಚಾಯ್ತಿಯಿಂದ ನೇರ ನಿಗದಿತ ಸ್ಥಳಕ್ಕೆ ಕರೆದೊಯ್ಯುವುದು. ಕಾರ್ಯಕ್ರಮ ಮುಗಿದ ಬಳಿಕ ಮರಳಿ ಆಯಾ ಪಂಚಾಯ್ತಿಗೆ ಕರೆತರುವ ಜವಾಬ್ದಾರಿಯನ್ನು ಸಮಿತಿ ನಿರ್ವಹಿಸಲಿದೆ. ಪಟ್ಟಣದಲ್ಲಿ ಸಹ ಎರಡು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ವೀಣಾ, ಪ.ಪಂ. ಮುಖ್ಯಾಧಿಕಾರಿ ಮಂಜುಳಾದೇವಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ಬಿಂದು ಮಾಧವ, ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಇಂದ್ರೇಶ್ ಸೇರಿದಂತೆ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.