ಭಾರತೀಯ ಸಂಸ್ಕೃತಿ ಶ್ರೇಷ್ಠ ಚಿಂತನೆಗಳ ಆಗರ
ತುಮಕೂರು ಸೆ. ೧೪- ವೈಯಕ್ತಿಕ ಅನುಭವಗಳನ್ನು ವಿಶ್ಲೇಷಿಸುವುದೇ ಭಾರತೀಯ ಸಂಸ್ಕೃತಿಯ ಧ್ಯೇಯ. ಬುದ್ಧಿ ಮತ್ತು ಭಾವನೆಗಳ ಸಂಗಮವಾದ ಧರ್ಮದ ಚಿಂತನೆಗಳು ನಮಗೆ ಸಮಗ್ರ ದೃಷ್ಟಿಯನ್ನಿತ್ತು ಸಮಷ್ಟಿಯನ್ನು ಯೋಗ್ಯವಾಗಿ ಅರಿಯಲು ಅನುವು ಮಾಡಿಕೊಡುತ್ತದೆ. ಪಾಶ್ಚಿಮಾತ್ಯ ಜಗತ್ತು ಇಂದು ಎಲ್ಲಾ ಭೌತಿಕ ಸಂಪತ್ತುಗಳ ನಡುವೆಯೂ ವ್ಯಕ್ತಿಯಲ್ಲಿ ಖಿನ್ನತೆಯ ಮನೋಭಾವವನ್ನು ಬೆಳೆಸಿದೆ. ಹಾಗಾಗಿ ಇದರಿಂದ ಅಂತರವನ್ನು ಕಾಪಾಡಿಕೊಂಡು ಶ್ರೇಷ್ಠ ಚಿಂತನೆಗಳ ಆಗರವಾದ ನಮ್ಮ ಭಾರತೀಯ ಸಂಸ್ಕೃತಿ ಪರಂಪರೆಯ ಸತ್ವಯುತ ವಿಚಾರಗಳ ಕಡೆ ಗಮನ ಹರಿಸುವುದು ಅತ್ಯಗತ್ಯವಾಗಿದೆ ಎಂದು ಗದಗ-ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ನಿರ್ಭಯಾನಂದ ಸರಸ್ವತ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಏರ್ಪಡಿಸಿದ್ದ ಸ್ವಾಮಿ ವೀರೇಶಾನಂದ ಸರಸ್ವತೀರವರ ’ವಿವೇಕಧಾರಾ’ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಕೃತಿ ಲೋಕಾರ್ಪಣೆಗೊಳಿಸಿ ದಿಕ್ಸೂಚಿ ಭಾಷಣ ಮಾಡಿದ ಅವರು, ಜಗತ್ತಿನಲ್ಲಿ ಇಪ್ಪತ್ತೊಂದು ವರ್ಷಗಳ ಅವಧಿಯಲ್ಲಿ ಅರವತ್ಮೂರು ಯುದ್ಧಗಳನ್ನು ಗೆದ್ದ ಚಕ್ರವರ್ತಿ ನೆಪೋಲಿಯನ್ ಅಂತಿಮವಾಗಿ ಖಡ್ಗ ಶಕ್ತಿಗಿಂತ ಆತ್ಮಶಕ್ತಿಯು ಬಲಿಷ್ಠ ಹಾಗೂ ಶ್ರೇಯಸ್ಕರ ಎಂದರು.
ಬದುಕಿನದ್ದಕ್ಕೂ ತಾನು ನಡೆಸಿದ ಬದುಕನ್ನು ಮೂರ್ಖನ ಜೀವನ ಎಂದೇ ಘೋಷಿಸಿಕೊಂಡ. ಅಲ್ಲದೆ ಭೌತಿಕ ಜಗತ್ತನ್ನು ಗೆದ್ದವನಿಗಿಂತ ಭಾವ ಜಗತ್ತಿನ ಒಡೆಯನೇ ಸರ್ವಶಕ್ತ ಎಂದು ಆತ್ಮಪೂರ್ವಕವಾಗಿ ಸಮ್ಮತಿಸಿದ. ಕ್ಷಣಿಕವಾದ ಜೀವನವನ್ನು ಮತ್ತು ಅಶಾಶ್ವತವಾದ ಸುಖ ಭೋಗಗಳನ್ನು ಮೆಟ್ಟಿ ನಿಸ್ವಾರ್ಥ ಬದುಕಿನತ್ತ ಸಾಗಿದಾಗಷ್ಟೇ ಜೀವನಕ್ಕೆ ವಿಸ್ತೃತ ಆಯಾಮವು ದೊರಕುತ್ತದೆ. ಆಗಷ್ಟೇ ವ್ಯಕ್ತಿಯು ತಾನೂ ಉತ್ತಮನಾಗಿ ಜಗತ್ತಿಗೂ ಉತ್ತಮವಾದುದನ್ನೇ ನೀಡಬಲ್ಲವನಾಗುತ್ತಾನೆ. ಅಂತಹ ಬದುಕಿನಲ್ಲಿ ಸಾರ್ಥಕತೆ, ಸುಖ, ತೃಪ್ತಿ ಮತ್ತು ಸಮಾಧಾನಗಳು ಮೇಳೈಸಿ ಆತ್ಮೋದ್ಧಾರವನ್ನು ಹೊಂದುವುದಲ್ಲದೇ ಚಿಜಗತ್ತಿನ ಉದ್ಧಾರಕ್ಕೂ ಕೊಡುಗೆ ನೀಡಬಹುದಾಗಿದೆ ಎಂದು ಅವರು ಹೇಳಿದರು.
ಉಪ ನಿಷತ್ತುಗಳ ಸಾರವಾದ ಈ ಸಂದೇಶವನ್ನೇ ಸ್ವಾಮಿ ವಿವೇಕಾನಂದರು ಆಧುನಿಕ ಭಾಷೆಯಲ್ಲಿ ನಮಗೆ ಅನುಗ್ರಹಿಸಿದ್ದಾರೆ. ಸ್ವಾಮಿ ವಿವೇಕಾನಂದರ ಬೋಧನೆಯ ವಿವಿಧ ಆಯಾಮಗಳನ್ನು ವಿಶಿಷ್ಠ ಶೀರ್ಷಿಕೆಗಳ ಮೂಲಕ ರಚಿಸಿ ಸಮಾಜದಲ್ಲಿ ಸದ್ಭಾವನೆಯನ್ನು ಜಾಗೃತಗೊಳಿಸುವ ಪವಿತ್ರ ಕಾರ್ಯಗೈದ ಸ್ವಾಮಿ ವೀರೇಶಾನಂದ ಸರಸ್ವತೀ ರವರ ಪರಿಶ್ರಮವು ಸ್ತುತ್ಯಾರ್ಹ ಎಂದರು.
ವಿವೇಕಧಾರಾ ಕೃತಿಯ ಕುರಿತು ಮಾತನಾಡಿದ ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಸಿಬಂತಿ ಪದ್ಮನಾಭ್, ಈ ಕೃತಿಯಲ್ಲಿ ಯುವಪೀಳಿಗೆಯನ್ನು ಧನಾತ್ಮಕವಾಗಿ ಪ್ರಚೋದಿಸುವ ಉನ್ನತ ಆಲೋಚನೆಗಳನ್ನು ವಿವೇಕಾನಂದರ ಚಿಂತನೆಯ ಬೆಳಕಿನಲ್ಲಿ ವಿಶ್ಲೇಷಿಸುವುದರ ಮೂಲಕ ಸ್ವಾಮೀಜಿರವರು ಮಹದುಪಕಾರ ಮಾಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕೃತಿಯ ಕುರಿತು ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ಬಿ.ಜಿ.ಲಲಿತಮ್ಮ ಮಾತನಾಡಿದರು.
ಲೇಖಕರಾದ ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಸಮಾಜದ ಬದಲಾವಣೆಯಲ್ಲಿ ಲೇಖಕನ ಪಾತ್ರ ಹಿರಿದು. ಉತ್ತಮ ಪುಸ್ತಕಗಳು ಸದಾ ಓದುಗರ ಸಂಖ್ಯೆಯನ್ನು ಹೆಚ್ಚಿಸುತ್ತವೆ. ಪ್ರಸಕ್ತ ಕಾಲದ ವಾಸ್ತವ ಸಂಗತಿಗಳ ಸೂಕ್ಷ್ಮತೆಯನ್ನು ಗ್ರಹಿಸುವ ಮೂಲಕ ಪರಂಪರೆಯ ಶ್ರೇಷ್ಠತೆಯನ್ನು ಅರಿಯುವ ಅಗತ್ಯತೆ ಇದೆ ಎಂದರು.
ಇದೇ ಸಂದರ್ಭದಲ್ಲಿ ನಾಡೋಜ ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ, ಮಾತೃಶ್ರೀ ಲಲಿತಾ ಶಾಸ್ತ್ರಿ, ಡಾ. ಬಾಬು ಕೃಷ್ಣಮೂರ್ತಿರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಣೇಬೆನ್ನೂರಿನ ಸ್ವಾಮಿ ಪ್ರಕಾಶಾನಂದಜೀ, ಚಿತ್ರದುರ್ಗದ ಸ್ವಾಮಿ ಬ್ರಹ್ಮನಿಷ್ಠಾನಂದಜೀ, ಬೆಂಗಳೂರಿನ ಸ್ವಾಮಿ ಅಭಯಾನಂದಜೀ, ಸ್ವಾಮಿ ಧೀರಾನಂದಜೀ, ಮಾಜಿ ಸಂಸದ ಜಿ.ಎಸ್. ಬಸವರಾಜು, ಹಿರಿಯ ಪತ್ರಕರ್ತ ಎಸ್. ನಾಗಣ್ಣ, ಸಮಾಜ ಸೇವಕರಾದ ಹೆಚ್.ಜಿ.ಚಂದ್ರಶೇಖರ್, ರಮೇಶ್‌ಬಾಬು, ಸಾಹಿತಿ ಪ್ರೊ.ಪದ್ಮಪ್ರಸಾದ್, ಬಾ.ಹ. ರಮಾಕುಮಾರಿ, ಮುರಳಿಕೃಷ್ಣಯ್ಯ, ಡಾ. ಚಿತ್ರಲಿಂಗಯ್ಯ ಮತ್ತಿತರರು ಭಾಗವಹಿಸಿದ್ದರು.
ಸ್ವಾಮಿ ಪರಮಾನಂದ ಜೀ ಸ್ವಾಗತಿಸಿದರು. ಚಿ. ಶ್ರೀನಿಧಿ ಶರ್ಮ ವಂದಿಸಿದರು. ಪ್ರೊ. ರಮ್ಯಾ ಕಲ್ಲೂರು ಕಾರ್ಯಕ್ರಮ ನಿರೂಪಿಸಿದರು.