ಇಬ್ಬರು ಮನೆಗಳ್ಳರ ಬಂಧನ: 50 ಲಕ್ಷ ಬೆಲೆಯ ಚಿನ್ನ-ಬೆಳ್ಳಿ ಆಭರಣ ವಶ
ತುಮಕೂರು, ಸೆ. ೧೪- ಮನೆಯೊಂದರ ಹಿಂಬಾಗಿಲು ಒಡೆದು ನಗದು ಹಾಗೂ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದ ಇಬ್ಬರು ಖದೀಮರನ್ನು ಜಯನಗರ ಪೊಲೀಸರು ಪತ್ತೆಹಚ್ಚಿ ಬಂಧಿಸಿ, ೫೦ ಲಕ್ಷ ರೂ. ಬೆಲೆಯ ಚಿನ್ನ-ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರದ ಗುಂಟೂರಿನ ಬಂಡಿಕಾಳ್ಳ ರತ್ನರಾಜು ಅಲಿಯಾಸ್ ರಾಜು (೩೬) ಹಾಗೂ ಮಧುಗಿರಿ ತಾಲ್ಲೂಕು ಹಳೇ ಇಟಕಲೋಟಿ ಗ್ರಾಮದ ಹೆಚ್.ವಿ. ಶ್ರೀನಿವಾಸ ಅಲಿಯಾಸ್ ಕಳ್ಳಸೀನ (೩೦) ಎಂಬುವರನ್ನು ಬಂಧಿಸಿದ್ದು, ಇವರಿಂದ ೪೯,೧೬,೫೨೦ ರೂ. ಬೆಲೆಯ ೮೧೯ ಗ್ರಾಂ ಚಿನ್ನದ ಒಡವೆಗಳು, ೮೮ ಸಾವಿರ ರೂ. ಬೆಲೆ ಬಾಳುವ ೧ ಕೆ.ಜಿ. ೩೦೦ ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಗರದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುಟುಂಬ ಸಮೇತರಾಗಿ ಕಳೆದ ಮಾರ್ಚ್ ೨ ರಂದು ಮದ್ದೂರಿಗೆ ಗೃಹಪ್ರವೇಶಕ್ಕಾಗಿ ಮನೆಯವರು ಹೋಗಿದ್ದರು. ಈ ಸಂದರ್ಭವನ್ನು ಹೊಂಚು ಹಾಕಿರುವ ಸದರಿ ಖದೀಮರು ಮನೆಯ ಹಿಂಭಾಗಿಲನ್ನು ಆಯುಧದಿಂದ ಮೀಟಿ ಒಳನುಗ್ಗಿ ಮನೆಯೊಳಗಿದ್ದ ೧೦೦ ಗ್ರಾಂ ತೂಕದ ಚಿನ್ನದ ಒಡವೆಗಳು, ೩ ಕೆ.ಜಿ. ೩೦೦ ಗ್ರಾಂ ತೂಕದ ಬೆಳ್ಳಿ ವಸ್ತುಗಳು ಹಾಗೂ ೧ ಲಕ್ಷ ರೂ. ನಗದನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದರು.
ಅಡಿಷನಲ್ ಎಸ್ಪಿಗಳಾದ ವಿ. ಮರಿಯಪ್ಪ, ಬಿ.ಎಸ್. ಅಬ್ದುಲ್ ಖಾದರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ತಿಲಕ್‌ಪಾರ್ಕ್ ವೃತ್ತದ ಸರ್ಕಲ್ ಇನ್ಸ್‌ಪೆಕ್ಟರ್ ಪುರುಷೋತ್ತಮ್, ಜಯನಗರ ಪಿಎಸ್‌ಐ-೨ ಬಿ.ಕೆ. ಹನುಮಂತರಾಯಪ್ಪ, ಸಿಬ್ಬಂದಿಗಳಾದ ಎಂ.ಎಸ್. ಅಬೀದ್, ಸಿದ್ದಲಿಂಗರಾಧ್ಯ, ಮಂಜುನಾಥ್, ಚಾಲಕ ಸಿದ್ದೇಶ್ವರ, ಪಿ.ಸಿ. ನಿಜಾಮುದ್ದೀನ್ ಷಾ, ಲೋಕೇಶ್, ನವೀನ್‌ಕುಮಾರ್, ಸುನೀಲ್ ಲಮಾಣಿ, ಸುನೀಲ್‌ಕುಮಾರ್, ರಾಮಕೃಷ್ಣ, ಸುಶ್ಮಿತಾ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಹೆಚ್.ಸಿ. ನರಸಿಂಹರಾಜು, ಹೆಚ್.ಸಿ. ಜಗದೀಶ್ ಅವರು ಕಾರ್ಯಾಚರಣೆ ನಡೆಸಿ ಸದರಿ ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಶ್ರಮಿಸಿದ್ದಾರೆ ಎಂದು ಅವರು ವಿವರಿಸಿದರು.
ಬಂಧಿತ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಅವರು ನೀಡಿದ ಸುಳಿವಿನ ಮೇರೆಗೆ ತಿಲಕ್‌ಪಾರ್ಕ್ ವೃತ್ತದ ಠಾಣೆಗಳ ವ್ಯಾಪ್ತಿ, ನಗರಠಾಣೆ ವ್ಯಾಪ್ತಿ ಹಾಗೂ ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿರುವ ಮಾಲನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಈ ಆರೋಪಿಗಳ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ೧೦ ಪ್ರಕರಣ, ಹೊಸ ಬಡಾವಣೆ ಪೊಲೀಸ್ ಠಾಣೆಯ ೧ ಪ್ರಕರಣ, ನಗರ ಪೊಲೀಸ್ ಠಾಣೆ ೨ ಪ್ರಕರಣ ಹಾಗೂ ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೧ ಪ್ರಕರಣ ಸೇರಿ ಒಟ್ಟು ೧೫ ಪ್ರಕರಣಗಳು ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್ಪಿ ಕೆ.ಆರ್. ಚಂದ್ರಶೇಖರ್, ತಿಲಕ್‌ಪಾರ್ಕ್ ಸಿಪಿಐ ಜಿ. ಪುರುಷೋತ್ತಮ, ಜಯನಗರ ಪಿಎಸ್‌ಐಗಳಾದ ಮಹಾಲಕ್ಷ್ಮಮ್ಮ, ಹನುಮಂತರಾಯಪ್ಪ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.