ಈದ್‌ಮಿಲಾದ್-ಗಣೇಶೋತ್ಸವ: ನಿಯಮ ಪಾಲಿಸಲು ಎಸ್ಪಿ ಸೂಚನೆ
ತುಮಕೂರು, ಸೆ. ೧೪- ಜಿಲ್ಲೆಯಲ್ಲಿ ನಡೆಯಲಿರುವ ಗಣೇಶ ವಿಸರ್ಜನಾ ಮಹೋತ್ಸವ ಹಾಗೂ ಈದ್‌ಮಿಲಾದ್ ಹಬ್ಬದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ಆಯೋಜಕರುಗಳು ಸರ್ಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಸೂಚನೆ ನೀಡಿದ್ದಾರೆ.
ಸೆ. ೧೪ ರಂದು ಈದ್‌ಮಿಲಾದ್ ಹಬ್ಬ ಇದ್ದು, ಅಂದು ನಗರದ ಗೂಡ್ಸ್‌ಶೆಡ್ ಕಾಲೋನಿ, ನಜರಾಬಾದ್, ಪೂರ್‌ಹೌಸ್ ಕಾಲೋನಿ, ಸದಾಶಿವನಗರ ಸೇರಿದಂತೆ ವಿವಿಧ ಬಡಾವಣೆಯಲ್ಲಿ ಈದ್ ಮಿಲಾದ್ ಹಬ್ಬದ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆ ಸಂಜೆ ೭ ಗಂಟೆಗ ಈದ್ಗಾ ಮೈದಾನ ತಲುಪಲಿದೆ. ಈ ವೇಳೆ ಯಾವುದೇ ರೀತಿಯ ತೊಂದರೆಗಳಾಗದಂತೆ ಎಚ್ಚರಿಕೆ ವಹಿಸುವಂತೆ ಸಮುದಾಯದ ಮುಖಂಡರಿಗೆ ಈಗಾಗಲೇ ತಿಳಿಸಲಾಗಿದೆ. ಹಾಗೆಯೇ ಪೊಲೀಸ್ ಇಲಾಖೆಯು ಸಹ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈದ್‌ಮಿಲಾದ್ ಹಬ್ಬದ ಪ್ರಯುಕ್ತ ನಗರದ ಬಿ.ಹೆಚ್. ರಸ್ತೆ, ಅಶೋಕ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಪ್ಲೆಕ್ಸ್, ಬಂಟಿಂಗ್ಸ್ ಕಟ್ಟುವಂತಿಲ್ಲ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಉಳಿದಂತೆ ಬೇರೆ ಬೇರೆ ರಸ್ತೆಗಳಲ್ಲಿ ಪ್ಲೆಕ್ಸ್, ಬಂಟಿಂಗ್ಸ್ ಅಳವಡಿಸಲು ಮಹಾನಗರ ಪಾಲಿಕೆಯಲ್ಲಿ ತೆರೆಯಲಾಗಿರುವ ಏಕಗವಾಕ್ಷಿ ಕೌಂಟರ್‌ನಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಾಗಿದೆ. ಒಂದು ವೇಳೆ ಅನುಮತಿ ಪಡೆಯದೇ ಇತರೆ ರಸ್ತೆಗಳಲ್ಲೂ ಪ್ಲೆಕ್ಸ್, ಬಂಟಿಂಗ್ಸ್ ಕಟ್ಟಿದರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ತುಮಕೂರು ಜಿಲ್ಲೆ ಶಾಂತಿ-ಸುವ್ಯವಸ್ಥೆ ಹಾಗೂ ಭಾವೈಕ್ಯತೆಗೆ ಹೆಸರಾಗಿದೆ. ಇದನ್ನು ಕಾಪಾಡಿಕೊಂಡು ಹೋಗುವಂತೆ ಈದ್‌ಮಿಲಾದ್ ಹಬ್ಬದ ಪ್ರಯುಕ್ತ ನಡೆದ ಮುಖಂಡರ ಸಭೆಯಲ್ಲಿ ತಿಳಿಸಲಾಗಿದೆ ಎಂದರು.
ಡಿ.ಜೆ.ಗೆ ಅವಕಾಶ ಇಲ್ಲ
ಗಣೇಶಮೂರ್ತಿ ವಿಸರ್ಜನಾ ಮಹೋತ್ಸವದ ವೇಳೆ ಡಿ.ಜೆ. ಬಳಕೆಯನ್ನು ನಿರ್ಬಂಧಿಸಲಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಡಿ.ಜೆ. ಬಳಸಲು ಅವಕಾಶ ನೀಡುವುದಿಲ್ಲ ಎಂದರು.
ಸುಪ್ರೀಕೋರ್ಟ್ ನಿರ್ದೇಶನದ ಪ್ರಕಾರ ಸೌಂಡ್ ಬಾಕ್ಸ್‌ಗಳನ್ನು ಬಳಕೆ ಮಾಡಬಹುದು. ಅದರಲ್ಲೂ ಇಂತಿಷ್ಠೆ ಸೌಂಡ್ ಇರಬೇಕೆಂಬ ನಿಯಮಾವಳಿ ಇದೆ. ಅದನ್ನು ಆಯೋಜಕರು ಪಾಲಿಸಬೇಕು ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವ ದಿನಾಚರಣೆ: ಬಂದೋಬಸ್ತ್‌ಗೆ ೯೦೦ ಪೊಲೀಸರ ನಿಯೋಜನೆ
ಸೆ. ೧೫ ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಪರಿಚಯಿಸಲು ಆಯೋಜಿಸಿರುವ ೯೦ ಕಿ.ಮೀ. ಬೃಹತ್ ಮಾನವ ಸರಪಳಿ ಕಾರ್ಯಕ್ರಮದ ಬಂದೋಬಸ್ತ್‌ಗೆ ೯೦೦ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದರು.
ಬೀದರ್‌ನಿಂದ ಚಾಮರಾಜನಗರದ ವರೆಗೆ ನಡೆಯಲಿರುವ ಈ ಮಾನವ ಸರಪಳಿ ನಡೆಯಲಿದೆ. ಹಾಗೆಯೇ ನಮ್ಮ ಜಿಲ್ಲೆಯ ಸಿರಾ ತಾಲ್ಲೂಕು ತಾವಕರೆಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಿಂದ ಹಿರೇಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಂದಿಹಳ್ಳಿವರೆಗೆ ಮಾನವ ಸರಪಳಿ ಸಾಗಲಿದೆ. ಈ ಮಾರ್ಗದಲ್ಲಿ ಬೆಳಿಗ್ಗೆ ೬ ರಿಂದ ೧೨ ಗಂಟೆವರೆಗೆ ಮಾನವ ಸರಪಳಿ ಕಾರ್ಯಕ್ರಮದ ಬಂದೋ ಬಸ್ತ್ ಕಾರ್ಯಕ್ಕಾಗಿ ೩ ಕೆಎಸ್‌ಆರ್‌ಪಿ ತುಕಡಿ, ೮ ಡಿಎಆರ್ ತುಕಡಿ, ೬೦೦ ಪೊಲೀಸರು ಹಾಗೂ ಅಧಿಕಾರಿಗಳು ಸೇರಿದಂತೆ ಸುಮಾರು ೯೦೦ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.