ಟಿವಿ ದುರಸ್ಥಿಪಡಿಸದ ಕಂಪನಿಗೆ ಗ್ರಾಹಕರ ವ್ಯಾಜ್ಯಗಳ ನ್ಯಾಯಾಲಯದಿಂದ ಹಣ ವಾಪಸ್ ಮಾಡಲು ಆದೇಶ
ಕೋಲಾರ,ಸೆ,೧೪- ಹೊಸದಾಗಿ ಖರೀದಿಸಿದ್ದ ಟಿವಿಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷವನ್ನು ಸರಿಪಡಿಸದ ಎಲೆಕ್ರ್ಟಾನಿಕ್ಸ್ ಮಳಿಗೆ ಮತ್ತು ಟಿವಿ ಕಂಪನಿಗೆ ಕೋಲಾರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಟಿವಿ ಖರೀದಿಸಲು ವಿನಿಯೋಗಿಸಿದ್ದ ಹಣವನ್ನು ಶೇ.೧೦ ಬಡ್ಡಿ ಸಮೇತ ಹಿಂತಿರುಗಿಸುವಂತೆ ಆದೇಶಿಸಿದೆ.
ಕೋಲಾರ ನಗರದ ಕಿಲಾರಿಪೇಟೆ ಸತ್ಯಮ್ಮ ದೇವಾಲಯ ಸಮೀಪದ ಎಸ್.ಸುರೇಶ್ ಎಂಬುವರು ಕೋಲಾರದ ರೆಡ್ಡಿ ಎಲೆಕ್ರ್ಟಾನಿಕ್ಸ್ ಮಳಿಗೆಯಿಂದ ಸೋನಿ ಕಂಪನಿಯ ಟಿವಿಯನ್ನು ೬೭,೫೦೦ ರೂ ಕೊಟ್ಟು ಖರೀದಿಸಿದ್ದರು. ಆದರೆ, ಟಿವಿ ೧೫ ದಿನಗಳಲ್ಲಿಯೇ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ.
ಮನೆಯ ವಿದ್ಯುತ್ ಸರಬರಾಜಿನ ವ್ಯತ್ಯಯದಿಂದ ಈ ರೀತಿಯಾಗಿದೆಯೆಂದು ನೆಪವೊಡ್ಡಿ ವಾರೆಂಟಿ ಅವಯ ದುರಸ್ಥಿ ಮಾಡಿಸುವುದನ್ನು ನಿರ್ಲಕ್ಷಿಸಿತ್ತು. ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ವಕೀಲ ಕೆಂಬೋಡಿ ಕೆ.ಎನ್.ನಾರಾಯಣಸ್ವಾಮಿ ಮೂಲಕ ನೋಟೀಸ್ ನೀಡಿದರೂ ಯಾವುದೇ ಕ್ರಮಕೈಗೊಂಡಿರಲಿಲ್ಲ.
ಆನಂತರ ತಮ್ಮ ವಕೀಲರ ಮೂಲಕವೇ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ನೀಡಿದ್ದಾರೆ.
ದೂರಿನ ಸಂಬಂಧ ಎರಡೂ ಕಡೆಯಿಂದ ವಾದವನ್ನು ಆಲಿಸಿದ ಆಯೋಗವು ಗ್ರಾಹಕ ಸಂರಕ್ಷಣಾ ಕಾಯ್ದೆ ಪ್ರಕಾರ ಟಿವಿ ಖರೀದಿಸಲು ನೀಡಿದ್ದ ೬೭೫೦೦ ರೂಪಾಯಿಗಳನ್ನು ಹಣ ವಾಪಸ್ ಮಾಡುವ ದಿನಾಂಕದವರೆವಿಗೂ ಶೇ.೧೦ ಬಡ್ಡಿ ಸೇರಿಸಿ ಗ್ರಾಹಕ ಎಸ್.ಸುರೇಶ್‌ರಿಗೆ ವಾಪಸ್ ನೀಡಬೇಕೆಂದು ಆದೇಶಿಸಿದೆ.
ಸೇವಾ ನ್ಯೂನ್ಯತೆಗೆ ಪರಿಹಾರವಾಗಿ ೮ ಸಾವಿರ ರೂಗಳನ್ನು ಪ್ರಕರಣದ ಖರ್ಚಿನ ಬಾಬತ್ತಾಗಿ ಪಾವತಿಸಲು ಆದೇಶಿಸಿದೆ.
ಆ.೨೮ ರಂದು ಈ ಆದೇಶ ಹೊರಡಿಸಿರುವ ಆಯೋಗವು ಆದೇಶವಾದ ೪೫ ದಿನಗಳ ಒಳಗಾಗಿ ಆದೇಶ ಪಾಲಿಸಿ ಮಾಡಿ ಆಯೋಗಕ್ಕೆ ಅನುಸರಣಾ ವರದಿಯನ್ನು ಸಲ್ಲಿಸಬೇಕೆಂದು ಆಯೋಗದ ಅಧ್ಯಕ್ಷ ವೈ.ಎಸ್.ತಮ್ಮಣ್ಣ ಮತ್ತು ಸದಸ್ಯ ಕೆ.ಎಸ್.ರಾಜು ಸೂಚಿಸಿದ್ದಾರೆ.