ಜಾಗ ದೊರೆತರೆ ಅಶೋಕಪುರಂ ಜನತೆಗೆ ಟೌನ್‍ಶಿಪ್
ಸಂಜೆವಾಣಿ ನ್ಯೂಸ್
ಮೈಸೂರು: ಸೆ.14:- ನಗರದ ಒಳಗೆ ಮತ್ತು ಹೊರಗೆ ಅಗತ್ಯ ಭೂಮಿ ದೊರೆತರೆ ಟೌನ್‍ಶಿಪ್ ನಿರ್ಮಾಣ ಮಾಡಿ ಅಶೋಕಪುರಂನಲ್ಲಿ ವಾಸಿಸುತ್ತಿರುವ ಬಡವರಿಗೆ ಮನೆ ನಿರ್ಮಾಣ ಸೇರಿ ಮೂಲ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಅಶೋಕಪುರಂ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ದೊಡ್ಡ ಗರಡಿ ಸಂಘದಲ್ಲಿ ಆಯೋಜಿಸಿದ್ದ 112ನೇ ವರ್ಷದ ಅಂಬಾ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಸರಾ ಪ್ರಯುಕ್ತ ಸಾಂಪ್ರದಾಯಿಕವಾಗಿ ಗರಡಿ ಪೂಜೆ ಮಾಡಲಾಗಿದೆ. ಅಶೋಕಪುರಂನ ಮುಖಂಡರು, ನಿವಾಸಿಗಳು ಇಟ್ಟಿರುವ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡಲಾಗುವುದು. ಯಾವುದೇ ವಿಚಾರಗಳಾಗಲೀ ಅಥವಾ ಬೇಡಿಕೆಗಳನ್ನು ಮುಂದಿಟ್ಟಾಗ ನಾನಂತೂ ಇಲ್ಲವೆಂದು ಹೇಳಿಲ್ಲ ಎಂದರು.
ಮೊನ್ನೆಯಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದಾಗ ದಲಿತರ ವಿಚಾರ ಪ್ರಸ್ತಾಪಿಸಿ ಗುಲ್ಬರ್ಗಾದಲ್ಲಿ ದಲಿತರಿಗಾಗಿ ಒಂದೇ ಕಡೆಯಲ್ಲಿ ಎರಡು ಸಾವಿರ ಮನೆ ನಿರ್ಮಾಣ ಮಾಡಲಾಗುವುದು. ಅದೇ ರೀತಿ ಮೈಸೂರಿನ ಅಶೋಕಪುರಂನ ಜನರಿಗೂ ಮಾಡುವಂತೆ ಹೇಳಿದರು.
ಈ ಬಗ್ಗೆ ಚಿಂತನೆ ನಡೆಸಲಾಗಿದೆ. ಮೈಸೂರಿನಲ್ಲಿ ಒಂದು ಟೌನ್‍ಶಿಪ್ ಮಾಡಲು ಜಾಗ ಹುಡುಕಲಾಗುವುದು. ಒಂದು ಉತ್ತಮ ಜಾಗ ದೊರಕಿದರೆ ಖಂಡಿತವಾಗಿ ಮನೆ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಅಶೋಕಪುರಂಗೆ ಆಗಬೇಕಿರುವ ಪ್ರಮುಖ ಸಮಸ್ಯೆಗಳನ್ನು ಪಟ್ಟಿ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು. ನಾವಿಬ್ಬರೂ ಒಟ್ಟಿಗೆ ಇರುವ ಕಾರಣ ದಬ್ಬಾಳಿಕೆ ಮಾಡಲು ಸಾಧ್ಯವಾಗಿಲ್ಲ. 2013ರಲ್ಲಿ ಇಡೀ ಮಂತ್ರಿಮಂಡಲ ರಚನೆ ಮಾಡಿದ್ದು ನಾನು ಮತ್ತು ಸಿದ್ದರಾಮಯ್ಯ ಹೊರತು ಯಾವ ಹೈಕಮಾಂಡ್ ಕೂಡ ಹಸ್ತಕ್ಷೇಪ ಮಾಡಿ ಮಂತ್ರಿಗಳನ್ನು ಆಯ್ಕೆ ಮಾಡಲಿಲ್ಲ. ಹಿರಿಯರಾದ ವಿ.ಶ್ರೀನಿವಾಸ ಪ್ರಸಾದ್ ಬೈದುಕೊಂಡು ಓಡಾಡಿದರೂ ಪರವಾಗಿಲ್ಲ. ಮಂತ್ರಿಮಾಡೋಣವೆಂದು ನಾನು ಮತ್ತು ಸಿದ್ದರಾಮಯ್ಯ ಅವರೇ ತೀರ್ಮಾನ ಮಾಡಿದರು ಎಂದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಮುಡಾಕ್ಕೆ 19 ಕೋಟಿ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಶುರುವಾಗಲಿದೆ ಎಂದರು.
ಮುಡಾದ ನಿವೇಶನಗಳ ಹಂಚಿಕೆ ವಿಚಾರದಲ್ಲಿ ಸಿಎಂ ಅವರನ್ನು ದುರ್ಬಲಗೊಳಿಸಲು ಪ್ರಯತ್ನ ಮಾಡಲಾಗುತ್ತಿದ್ದು, ನಾವು ಅವರೊಂದಿಗೆ ನಿಲ್ಲಬೇಕಿದೆ. ನಿವೇಶನ ಪಡೆಯಲು ಒತ್ತಡ ತಂದಿಲ್ಲ, ಶಿಫಾರಸು ಮಾಡಿಲ್ಲ, ರಾಜಕೀಯ ಪ್ರಭಾವ, ಅಧಿಕಾರ ಬಳಸಿಕೊಂಡಿಲ್ಲ ಎಂದು ಸಮರ್ಥಿಸಿಕೊಂಡರು.
ಮಾಜಿ ಮೇಯರ್ ಪುರುಷೋತ್ತಮ ಮಾತನಾಡಿ, ದೊಡ್ಡ ಗರಡಿ, ಚಿಕ್ಕಗರಡಿ, ಸಮುದಾಯ ಭವನದ ಅಭಿವೃದ್ಧಿಗೆ 10 ಕೋಟಿ ರೂಪಾಯಿ ನೀಡಲಾಗಿದೆ. ಆದಿ ಕರ್ನಾಟಕ ಮಹಾ ಸಂಸ್ಥೆ ಕಟ್ಟಡದ ನವೀಕರಣಕ್ಕೆ ಹೆಚ್ಚುವರಿ 6 ಕೋಟಿ ರೂ.ನೀಡುವಂತೆ ಮನವಿ ಮಾಡಿದರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಹಿರಿಯ ಮುಖಂಡ ಮ.ವೆಂಕಟರಾಮ್, ದೊಡ್ಡ ಗರಡಿ ಉಸ್ತಾದ್ ಪೈ.ಪುಟ್ಟಸ್ವಾಮಿ, ಖಲೀಫ್ ಪೈ.ಜಿ.ಸಿದ್ದಯ್ಯ ಸಂಘದ ಅಧ್ಯಕ್ಷ ಆರ್.ಸಿ.ಮಹೇಶ್, ಕೆಂಪೇಗೌಡ, ಹೊಸಹಳ್ಳಿ ಶಿವು, ವಿ.ರಾಮಸ್ವಾಮಿ, ಪೈ.ಚಂದ್ರಶೇಖರ್, ವೆಂಕಟರಾಮ್, ವಕೀಲ ಬಸವರಾಜು, ರಮೇಶ್, ಆದಿ ಕರ್ನಾಟಕ ಮಹಾಸಭಾದ ಅಧ್ಯಕ್ಷ ಸುನೀಲ್, ಶಿವಸ್ವಾಮಿ, ಈಶ್ವರ್, ಪೈ.ಕೃಷ್ಣ ಹಾಜರಿದ್ದರು.
ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಯಾದವಿ, ಸಮರ್ಥ್, ಅಶೋಕಪುರಂ ಹಿರಿಯ ಪೈಲ್ವಾನರು, ದಸರಾ ಪ್ರಶಸ್ತಿ ವಿಜೇತರಿಗೆ ಸನ್ಮಾನಿಸಲಾಯಿತು.